ಬಂಧಿತ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಚುನಾವಣಾ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಬಂಧಿತ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಚುನಾವಣಾ ಪ್ರಚಾರ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿ ಈ ತೀರ್ಪು ನೀಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ (ACJ) ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
“ಬಂಧಿತರಾಗಿರುವ ಎಲ್ಲರಿಗೂ ವಿಸಿ ಮೂಲಕ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಬೇಕೆಂದು ನೀವು ಬಯಸುತ್ತೀರಿ. ಈ ರೀತಿ ಮಾಡಿದರೆ ಎಲ್ಲಾ ಭಯಾನಕ ಅಪರಾಧಿಗಳು ರಾಜಕೀಯ ಪಕ್ಷಗಳನ್ನು ರಚಿಸುತ್ತಾರೆ. ದಾವೂದ್ ಇಬ್ರಾಹಿಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಮತ್ತು ವಿಸಿ ಮೂಲಕ ಪ್ರಚಾರ ಮಾಡುತ್ತಾರೆ” ಎಂದು ಎಸಿಜೆ ಮನಮೋಹನ್ ಅರ್ಜಿದಾರರನ್ನು ಟೀಕಿಸಿದರು.
ನ್ಯಾಯಪೀಠವು ರಾಜಕೀಯ ವಲಯಕ್ಕೆ ಬರಲು ಬಯಸುವುದಿಲ್ಲ ಆದರೆ ಪ್ರತಿಯೊಬ್ಬರೂ ನ್ಯಾಯಾಲಯವು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಬೇಕೆಂದು ಬಯಸುತ್ತಾರೆ ಎಂದು ಕೋರ್ಟ್ ಹೇಳಿದೆ. ಎಸಿಜೆ ಮನಮೋಹನ್, ಕಳೆದ ಕೆಲವು ವಾರಗಳಲ್ಲಿ ಒಬ್ಬ ವ್ಯಕ್ತಿಯನ್ನು ಜೈಲಿಗೆ ಹಾಕಬೇಕು ಅಥವಾ ಬಿಡುಗಡೆ ಮಾಡಲಿ ಎಂದು ಹೇಳುವ ಹಲವಾರು ಅರ್ಜಿಗಳನ್ನು ನ್ಯಾಯಾಲಯವು ವ್ಯವಹರಿಸಿದೆ ಎಂದರು.
ಅರ್ಜಿಯಲ್ಲಿ ಪ್ರಚಾರ ಮತ್ತು ತಂತ್ರವಿದೆ ಮತ್ತು ನ್ಯಾಯಾಲಯಕ್ಕೆ ಅದು ತಿಳಿದಿದೆ ಎಂದ ನ್ಯಾಯಮೂರ್ತಿಗಳು, ಇದಕ್ಕೆಲ್ಲ ನ್ಯಾಯಾಲಯವನ್ನು ಬಳಸಿಕೊಳ್ಳುವ ಪ್ರಯತ್ನವಿದೆ. ಇದು ತಂತ್ರದ ಭಾಗವಾಗುತ್ತಿದೆ. ಈ ವಿಚಾರ ನಮಗೆ ಅರ್ಥವಾಗುತ್ತಿಲ್ಲ ಎಂದು ಭಾವಿಸಬೇಡಿ. ಅರ್ಜಿಯು ಕಾನೂನಿನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದರು.
ಅಮರ್‌ಜೀತ್ ಗುಪ್ತಾ ಎಂಬುವವರು ಬಂಧಿತ ನಾಯಕರಿಗೆ ಶಿಕ್ಷೆಯಾಗದ ಹೊರತು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಚಾರ ಮಾಡಲು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನಗಳನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಮಾರ್ಚ್ 16, 2024 ರಂದು ಜಾರಿಗೆ ಬಂದ ನಂತರ ವಿವಿಧ ರಾಜಕೀಯ ನಾಯಕರ ಬಂಧನದ ಸಮಯದಿಂದ ತಾನು ನೊಂದಿದ್ದೇನೆ ಎಂದು ಗುಪ್ತಾ ವಾದಿಸಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಉಲ್ಲೇಖಿಸಿದ ಅವರು, ಚುನಾವಣಾ ಪ್ರಚಾರದ ವೀಕ್ಷಕ/ಕೇಳುಗರಾಗಿ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಮಾಹಿತಿ ಪಡೆಯುವ ದೆಹಲಿಯ ಜನರ ಮೂಲಭೂತ ಹಕ್ಕನ್ನು ಈ ಬಂಧನ ಕಸಿದುಕೊಂಡಿದೆ ಎಂದು ಹೇಳಿದರು.