ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗಳ ವಿರುದ್ಧ ದಿನದಿಂದ ದಿನಕ್ಕೆ ಆರೋಪಗಳು ಹೆಚ್ಚುತ್ತಿವೆ. ಇನ್ನೊಂದೆಡೆ ನ್ಯಾಯಾಲಯದಿಂದ ಜಾಮೀನು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮುರುಘಾಶ್ರೀಗಳ ಪೀಠತ್ಯಾಗಕ್ಕೆ ಒತ್ತಡಗಳು ಹೆಚ್ಚುತ್ತಿದ್ದು, ಪ್ರಭಾರ ಪೀಠಾಧ್ಯಕ್ಷರ ನೇಮಕಕ್ಕೆ ಸಿದ್ಧತೆ ನಡೆಸಲಾಗಿದೆ.
ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆಯ ವಿರಕ್ತಿ ಮಠದ ಬಸವಪ್ರಭುಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮಠದ ಭಕ್ತರು, ಆಡಳಿತ ಮಂಡಳಿ ಸದಸ್ಯರು, ಮುಖಂಡರು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ಪ್ರಕಾರವಾಗಿ ಕೋರ್ಟ್ ಗೆ ಮನವಿ ಸಲ್ಲಿಸಿ ಅನುಮತಿ ಪಡೆಯುವ ಬಗ್ಗೆ ಚರ್ಚೆ ನಡೆದಿದೆ.
ಬಸವಪ್ರಭುಶ್ರೀ ಪ್ರಭಾರ ಪೀಠಾಧ್ಯಕ್ಷರಾಗಿ ನೇಮಕವಾಗಲು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸವಪ್ರಭುಶ್ರೀ ನೇಮಕ ನ್ಯಾಯ ಸಮ್ಮತವಲ್ಲ. ಅವರು ಮುರುಘಾಶ್ರೀಗಳ ರಕ್ಷಣೆಗಾಗಿ ಇದ್ದಾರೆ ಎಂದು ಕೆಲ ಮಠಾಧೀಶರು, ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.