ದಾವಣಗೆರೆ: ಒಂದೆಡೆ ಕಾವೇರಿ ನೀರಿಗಾಗಿ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದರೆ, ಇನ್ನೊಂದೆಡೆ ದಾವಣಗೆರೆಯಲ್ಲಿ ಬರದಿಂದಾಗಿ ಬೇಸತ್ತಿರುವ ರೈತರು ಬೆಳೆಗಳಿಗೆ ನೀರು ಹರಿಸಲು ನೀರು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಬರದಿಂದಾಗಿ ಭತ್ತದ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಭತ್ತದ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ರೈತರು ಧರಣಿ ಕುಳಿತಿದ್ದಾರೆ. ಈ ವೇಳೆ ರೈತನೋರ್ವ ವಿಷದ ಬಾಟಲಿ ತೆಗೆದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದ ರೈತರು ಹಾಗೂ ಪೊಲೀಸರು ಆತನ ಕೈಯಲ್ಲಿದ್ದ ವಿಷದ ಬಾಟಲಿ ಕಸಿದುಕೊಂಡು, ರೈತನನ್ನು ರಕ್ಷಿಸಿದ್ದಾರೆ. ರಾಜ್ಯದಲ್ಲಿ ಒಂದೆಡೆ ಕಾವೇರಿ ಕಿಚ್ಚು ಹೆಚ್ಚುತ್ತಿದ್ದರೆ ಮತ್ತೊಂದೆಡೆ ಮಳೆ ಕೊರತೆ, ಬರದ ಛಾಯೆಯಿಂದ ಬೇಸತ್ತಿರುವ ಅನ್ನದಾತರು ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.