
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ 24ನೇ ಅಧಿವೇಶನ ದಾವಣಗೆರೆ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ.
ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಊಟ ಸೇರಿ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಸಮಾಜದ ಸಂಘಟನೆ ನಮ್ಮ ಉದ್ದೇಶವಾಗಿದೆ. ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ಕೊಡಿಸುವುದು ಪ್ರಮುಖ ಅಜೆಂಡಾ ಆಗಿದ್ದು, ಪಕ್ಷಾತೀತವಾಗಿ ನಡೆಯುತ್ತಿರುವ ಸಮಾವೇಶಕ್ಕೆ ಎಲ್ಲರ ಸಹಕಾರ ಇದೆ ಎಂದು ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸಮಾವೇಶದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಮತ್ತು ರಾಜ್ಯ ಸಚಿವರು ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಸಾಹಿತಿಗಳು, ಕಲಾವಿದರು, ನೌಕರರು, ಮಹಿಳೆಯರು ಕೂಡ ಭಾಗವಹಿಸಲಿದ್ದು, ವಿವಿಧೆಡೆಯಿಂದ ಸಾವಿರಾರು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನ ವೇದಿಕೆಗೆ ಎಸ್. ನಿಜಲಿಂಗಪ್ಪ, ಸಮನಾಂತರ ವೇದಿಕೆಗೆ ಜೆ.ಹೆಚ್. ಪಟೇಲ್ ವೇದಿಕೆ ಎಂದು ನಾಮಕರಣ ಮಾಡಲಾಗಿದೆ. ಬೃಹತ್ ಪೆಂಡಾಲ್ ಗಳನ್ನು ಹಾಕಲಾಗಿದ್ದು, ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಬಂದವರು ತಂಗಲು ವಿವಿಧೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಜಿಲ್ಲಾಡಳಿತದಿಂದ ದೋಸೆ ಉತ್ಸವ ಆಯೋಜಿಸಿದ್ದು, ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿಯಬಹುದಾಗಿದೆ.