ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ರಾಮೇಶ್ವರದಲ್ಲಿ ವೈದ್ಯನೊಬ್ಬ ಪತ್ನಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
36 ವರ್ಷದ ಶಿಲ್ಪಾ ಕೊಲೆಯಾದ ಮಹಿಳೆ. ಆಕೆಯ ಪತಿ 45 ವರ್ಷದ ಡಾ. ಚನ್ನೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದಾನೆ. 2005 ರಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಶಿಲ್ಪಾ ಹಾಗೂ ಡಾ.ಚನ್ನೇಶಪ್ಪ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ
ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚನ್ನೇಶಪ್ಪ ಫೆಬ್ರವರಿ 11 ರಂದು ರಕ್ತದೊತ್ತಡದಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಹೇಳಿ ಪತ್ನಿಗೆ ಹೈಡೋಸ್ ಇಂಜೆಕ್ಷನ್ ನೀಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಪತ್ನಿ ಮೃತಪಟ್ಟಿರುವುದಾಗಿ ಹೇಳಿದ್ದಾನೆ. ಶಿಲ್ಪಾ ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಕೊಲೆ ಪ್ರಕರಣ ಖಚಿತಪಡಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.