
ದಾವಣಗೆರೆ: 4 ವರ್ಷದ ಬಾಲಕಿ ಮನೆಯ ಬಳಿ ಆಟವಾಡುವಾಗ ಬೀದಿನಾಯಿಗಳು ಎಳೆದುಕೊಂಡು ಹೋಗಿ ಕಚ್ಚಿಹಾಕಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣಗೆರೆಯ ಆಜಾದ್ ನಗರ ಎರಡನೇ ಮೇನ್ ನಿವಾಸಿಯಾಗಿರುವ ತಬಸುಮ್ ಬಾನು ಮತ್ತು ತಲಾಂ ಶೇಖ್ ದಂಪತಿಯ ನಾಲ್ಕು ವರ್ಷದ ಮಗುವನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಬಾಲಕಿ ಮನೆಯಂಗಳದಲ್ಲಿದ್ದ ವೇಳೆ 4 -5 ಬೀದಿನಾಯಿಗಳು ಆಕೆಯ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಿವೆ. ಮಗುವಿನ ತಲೆ, ಕೈಕಾಲು ಸೇರಿ ದೇಹದ ವಿವಿಧ ಭಾಗಗಳಿಗೆ ನಾಯಿಗಳು ಕಚ್ಚಿದ್ದು, ಚೀರಾಟ ಕೇಳಿ ಮನೆಯವರು ಧಾವಿಸಿ ಬಂದು ನಾಯಿಗಳಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೇಯರ್ ಎಸ್.ಟಿ. ವೀರೇಶ್ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ, ಬಾಲಕಿ ಆರೋಗ್ಯ ವಿಚಾರಿಸಿದ್ದಾರೆ.