ದಾವಣಗೆರೆ: ಯಾವುದೇ ನೋಟಿಸ್ ನೀಡದೆ ನನ್ನನ್ನು ಬಂಧಿಸಿದ್ದಾರೆ. ಸರ್ಕಾರ ಪೊಲೀಸ್ ಬಲದಿಂದ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಕೆಲಸ ಮಾಡಿದ್ದಾರೆ. ಇಂಥವುಗಳಿಗೆಲ್ಲ ನಾನೇನು ಬಗ್ಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಳಗಾವಿಯಲ್ಲಿ ಬಂಧಿತರಾಗಿದ್ದ ಅವರು ದಾವಣಗೆರೆಯಲ್ಲಿ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಾವುದೇ ನೋಟಿಸ್ ಕೊಡದೆ ನನ್ನನ್ನು ಬಂಧಿಸಿದ್ದಾರೆ. ರಾತ್ರಿಯೆಲ್ಲ ನಾಲ್ಕೈದು ಜಿಲ್ಲೆಗಳಲ್ಲಿ ನನ್ನನ್ನು ಓಡಾಡಿಸಿದ್ದಾರೆ. ನನ್ನನ್ನು ಸುತ್ತಾಡಿಸಿ ಮಾನಸಿಕವಾಗಿ ಕುಗ್ಗಿಸಲು ಯತ್ನಿಸಿದರು. ನನ್ನ ಬೆನ್ನಿಗೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಕೆಲಸ ಮಾಡಿದ್ದಾರೆ. ಇಂಥವುಗಳಿಗೆಲ್ಲ ನಾನೇನು ಬಗ್ಗುವುದಿಲ್ಲ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದಗಳು. ಬೆಳಗಾವಿಯಲ್ಲಿ ನಾನು ಸತ್ಯಮೇವ ಜಯತೆ ಎಂದು ಹೇಳಿದ್ದೆ. ಸತ್ಯಕ್ಕೆ ಜಯ ಸಿಕ್ಕಿದೆ. ನಿನ್ನೆ ಅನುಭವಿಸಿದ ಕಷ್ಟ 35 ವರ್ಷದ ಹಿಂದೆಯೇ ಅನುಭವಿಸಿದ್ದೇನೆ. ಉಳಿದದ್ದನ್ನು ಮತ್ತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.