alex Certify ಜೂ. 7 ವರೆಗೆ ಕಠಿಣ ಲಾಕ್ ಡೌನ್, ನಿರ್ಬಂಧ ಉಲ್ಲಂಘಿಸಿದರೆ ಕಠಿಣ ಕ್ರಮ –ಏನಿರುತ್ತೆ? ಏನಿಲ್ಲ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂ. 7 ವರೆಗೆ ಕಠಿಣ ಲಾಕ್ ಡೌನ್, ನಿರ್ಬಂಧ ಉಲ್ಲಂಘಿಸಿದರೆ ಕಠಿಣ ಕ್ರಮ –ಏನಿರುತ್ತೆ? ಏನಿಲ್ಲ?

ದಾವಣಗೆರೆ: ಜಿಲ್ಲೆಯಾದ್ಯಂತ ಜೂನ್ 7 ರವರೆಗೆ ಕೋವಿಡ್ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಮೇ 31 ಮತ್ತು ಜೂನ್ 3 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿ, ಮಾಂಸ ಮತ್ತು ಮೀನು ಹಾಗೂ ಮದ್ಯದ ಅಂಗಡಿಗಳಿಗೆ ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆ ಹೊರಡಿಸಲಾಗಿರುವ ನಿರ್ಬಂಧ /ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಈಗಾಗಲೇ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಜಿಲ್ಲೆಯಲ್ಲಿ ಸತತವಾಗಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಪ್ರಮಾಣ ತಗ್ಗಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದಾಗ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೊಸ ನಿರ್ಬಂಧಗಳನ್ವಯ ಮೇ.31 ಮತ್ತು ಜೂ.3 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು, ಮದ್ಯದ ಅಂಗಡಿಗಳಿಗೆ ಮಾತ್ರ ಅವಕಾಶ ಇದ್ದು ಉಳಿದ ದಿನಗಳು ಹಾಲು ಮತ್ತು ಔಷಧಿಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ಬಂದ್ ಇರುತ್ತದೆ.

ಜೂ.4 ರವರೆಗೆ ಮಾತ್ರ ನಿಗದಿತ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಗರಿಷ್ಠ 10 ಜನರು ಮಾತ್ರ ಭಾಗವಹಿಸಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲಾ ಅಂಗಡಿ ಮುಂಗಟ್ಟುಗಳು/ವಾಣಿಜ್ಯ/ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ.

ಕೃಷಿ ಅವಲಂಬಿತ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿಸಿದೆ ಹಾಗೂ ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ಸಂಬಂಧಿತ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತತ್ಸಂಬಂಧಿತ ಕಾರ್ಯ ಚಟುವಟಿಕೆಗಳಿಗೆ ಹಾಗೂ ಸಿಬ್ಬಂದಿ ಕೃಷಿ ಕೈಗಾರಿಕಾ ಸಂಸ್ಥೆಗಳು ನೀಡಿದ ಅರ್ಹ ಗುರುತಿನ ಚೀಟಿ/ಅಧಿಕೃತ ಪತ್ರವನ್ನು ತೋರಿಸುವ ಮೂಲಕ ಓಡಾಡುವುದಕ್ಕೆ ಅನುಮತಿಸಿದೆ.

ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಕೀಟ ನಾಶಕಗಳು, ಕೃಷಿ ಕೋಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಸಂಬಂಧಿಸಿದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಿದೆ.

ಜೂ.4 ರವರೆಗೆ ಮಾತ್ರ ನಿಗದಿತ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಗರಿಷ್ಠ 10 ಜನರು ಮಾತ್ರ ಭಾಗವಹಿಸಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಮದುವೆಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಉಳಿದ ಎಲ್ಲಾ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.

ಅಂತ್ಯಸಂಸ್ಕಾರ/ಶವ ಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಿದೆ. ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್‍ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಲಾಗುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು.

ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಬಳಸಬಹುದು, ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್‍ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ಕರ್ತವ್ಯ ನಿಮಿತ್ತ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ, ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಪಾಸಣಾ ಸಿಬ್ಬಂದಿಗಳಿಗೆ ತೋರಿಸಬೇಕು. ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿಸಲಾಗಿದೆ.

ಕ್ಲಿನಿಕ್, ಆಸ್ಪತ್ರೆ, ಲಸಿಕೆ ಹಾಗೂ ಪರೀಕ್ಷೆ ಉದ್ದೇಶಗಳಿಗೆ ಕನಿಷ್ಟ ವೈದ್ಯಕೀಯ ದಾಖಲೆಗಳು, ವೈದ್ಯ ಸಲಹಾ ಚೀಟಿ, ಆಸ್ಪತ್ರೆಯಲ್ಲಿ ದಾಖಲಾದ ವಿವರಗಳ ರುಜುವಾತಿನೊಂದಿಗೆ ಸಂಚರಿಸಲು ಅನುಮತಿಸಲಾಗಿದೆ.

ಹೋಟೆಲ್, ರೆಸ್ಟೋರೆಂಟ್‍ಗಳು, ಉಪಾಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿ ಇದೆ. ಯಾವುದೇ ರೀತಿಯ ಪಾರ್ಸ್‍ಲ್‍ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ.

ಕೋವಿಡ್-19 ಕ್ಕೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ಕಾರದ ಆದೇಶ ಸಂಖ್ಯೆ ಆರ್‍ಡಿ/158/ಟಿಎನ್‍ಆರ್/2020 ದಿ.07.05.2021ರಂತೆ ಕಾರ್ಯನಿರ್ವಹಿಸಬೇಕು. ಆದರೆ, ಈ ಕಛೇರಿಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಕಛೇರಿ ವೇಳೆಯನ್ನು ಮೀರಿ ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ ನ್ಯಾಯಾಂಗದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸುವುದಕ್ಕೆ ಅನುಮತಿಸಿದೆ.

ಭಾರತ ಸರ್ಕಾರದ, ಅದರ ಸ್ವಾಯತ್ತ/ಅಧೀನ ಸಂಸ್ಥೆಗಳ ಮತ್ತು ಸಾರ್ವಜನಿಕ ನಿಗಮಗಳ ಕಚೇರಿಗಳಾದ ದೂರಸಂಪರ್ಕ, ಅಂಚೆ ಕಚೇರಿ, ಬ್ಯಾಂಕುಗಳು, ಆರ್‍ಬಿಐ ನಿಯಂತ್ರಿಕ ಹಣಕಾಸು ಸಂಸ್ಥೆಗಳು, ರೈಲ್ವೇ ಮತ್ತು ತತ್ಸಂಬಂಧಿತ ಕಾರ್ಯಚರಣೆಗಳು ಕೆಲವು ಸಿಬ್ಬಂದಿಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸತಕ್ಕದ್ದು.

ಸರ್ಕಾರದ ಆದೇಶದ ಪ್ರಕಾರ ಸರ್ಕಾರೇತರ ಸಂಸ್ಥೆಗಳ ಕಛೇರಿಗಳು, ಇತರೆ ಎಲ್ಲಾ ಕಚೇರಿಗಳ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ತುರ್ತು ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...