ಗ್ರಾಹಕರೊಬ್ಬರು ತಮ್ಮ ಮನೆಯ ಮೂರು ತಿಂಗಳ ವಿದ್ಯುತ್ ಶುಲ್ಕವನ್ನು ಪಾವತಿಸಿಲ್ಲವೆಂಬ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸಿದ ಬೆಸ್ಕಾಂಗೆ ದಾವಣಗೆರೆ ಜಿಲ್ಲಾ ಗ್ರಾಹಕ ಪರಿಹಾರ ಆಯೋಗ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ: ದಾವಣಗೆರೆಯ ಪ್ರವೀಣ್ ಉಲ್ಲಾಸ್ ರೇವಣಕರ್ ಎಂಬವರು ಮೂರು ತಿಂಗಳ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಬೆಸ್ಕಾಂ ಸಿಬ್ಬಂದಿ, ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಪ್ರವೀಣ್, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ಗ್ರಾಹಕರ ಪರಿಹಾರ ಆಯೋಗ, ಬೆಸ್ಕಾಂ ಸಿಬ್ಬಂದಿ, ಕೆಇಆರ್ಸಿ ಕೋಡ್ 2014ರ ನಿಯಮ 9ರ ಅಡಿಯಲ್ಲಿ ಪ್ರಕ್ರಿಯೆಗಳನ್ನು ಪಾಲಿಸದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಗಮನಿಸಿದೆ. ಇದನ್ನು ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆ ಕಾರಣಕ್ಕೆ 20 ಸಾವಿರ ರೂಪಾಯಿ ಹಾಗೂ ಪ್ರಕರಣದ ವೆಚ್ಚವಾಗಿ 5 ಸಾವಿರ ರೂಪಾಯಿಗಳನ್ನು ನೀಡುವಂತೆ ಆದೇಶಿಸಿದೆ.
ಈ ಹಣವನ್ನು 30 ದಿನದೊಳಗೆ ಪಾವತಿಸದಿದ್ದರೆ ಶೇಕಡ 6ರ ಬಡ್ಡಿ ಸಹಿತ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಮಹಾಂತೇಶ ಈರಪ್ಪ ಶಿಗ್ಲಿ ಮತ್ತು ಸದಸ್ಯೆ ಗೀತಾ ತೀರ್ಪು ನೀಡಿದ್ದಾರೆ.