ದಾವಣಗೆರೆ: ಕರ್ನಾಟಕದ ಒಂದೊಂದು ಊರಿಗೂ ಒಂದೊಂದು ವಿಶೇಷತೆ ಇದೆ. ಒಂದೊಂದು ಊರು ಒಂದೊಂದು ತಿಂಡಿ, ತಿನಿಸಿಗೆ ಫೇಮಸ್ ಹಾಗೆಯೇ ದಾವಣಗೆರೆ ಎಂದಾಕ್ಷಣ ನೆನಪಾಗುವುದು ಬೆಣ್ಣೆದೋಸೆ… ಬೆಣ್ಣೆದೋಸೆ ಎಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ…. ಇದೀಗ ದಾವಣಗೆರೆ ಬೆಣ್ಣೆದೋಸೆಯನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆದಿದೆ.
ದಾವಣಗೆರೆ ಬೆಣ್ಣೆದೋಸೆಗೆ ರಾಷ್ಟ್ರಮಟದ ಬ್ರ್ಯಾಂಡಿಂಗ್ ಕಲ್ಪಿಸುವ ಉದ್ದೇಶದಿಂದಲೇ ದೋಸೋತ್ಸವ ಎಂಬ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ಆಯೋಜಿಸಲಾಗಿತ್ತು. ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 23ರಿಂದ 25ರವರೆಗೆ ದಾವಣಗೆರೆಯ ಎಂ.ಬಿ.ಎ ಮೈದಾನ ಮತ್ತು ಗ್ಲಾಸ್ ಹೌಸ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ದೋಸೋತ್ಸವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಹರಿದುಬಂದಿದ್ದು, ಬೆಣ್ಣೆದೋಸೆಯ ರುಚಿಗೆ ಮಾರು ಹೋಗಿದ್ದಾರೆ.
ದಾವಣಗೆರೆ ಬೆಣ್ಣೆ ದೋಸೆ ಇತಿಹಾಸ ಪ್ರಸಿದ್ಧವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ದೋಸೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಇಂತದ್ದೊಂದು ವಿನೂತನ ಕಾರ್ಯಕ್ರರಮವನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗಿತ್ತು. ಕಳೆದ ನಾಲ್ಕು ದಶಕಗಳಿಂದ ಬೆಣ್ಣೆ ದೋಸೆ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ಮುಖಾಂತರ ಸಾರ್ವಜನಿಕರಿಗೆ ಗುಣಮಟ್ಟದ ಬೆಣ್ಣೆ ದೋಸೆಯನ್ನು ತಲುಪಿಸುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ.
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕ್ರಮದ ಸಂದರ್ಭದಲ್ಲಿಯೇ ನಗರದಲ್ಲಿ ದೋಸೋತ್ಸವ ಆಯೋಜಿಸಿದ್ದು, ಬಾಯಲ್ಲಿ ನೀರೂರಿಸುವಂತಹ ಬೆಣ್ಣೆದೋಸೆ ಸವಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಹಜವಾಗಿಯೇ ಮಹಾಸಭಾ ಕಾರ್ಯಕ್ರಮಕ್ಕೆ ಬಂದಂತಹ ಜನರಿಗೆ ಬೆಣ್ಣೆ ದೋಸೆಯ ಪರಿಚಯವಾಗಿದ್ದು, ರಾಷ್ಟ್ರಮಟ್ಟದಲ್ಲಿಯೂ ಬೆಣ್ಣೆದೋಸೆಯ ಘಮ ಪಸರಿಸುವಂತಾಗಿದೆ.
ವಿಶ್ವದ ಅತ್ಯುತ್ತಮ ಸಿಹಿತಿನಿಸಿನಲ್ಲಿ ಟೇಸ್ಟ್ ಅಟ್ಲಾಸ್ ನಲ್ಲಿ ಮೈಸೂರು ಪಾಕ್ ಹೇಗೆ ಜನಪ್ರಿಯ ತಿಂಡಿಗಳ ಸಾಲಿನಲ್ಲಿ ಸೇರಿದೆಯೋ ಹಾಗೇ ದಾವಣಗೆರೆ ಬೆಣ್ಣೆದೋಸೆಯನ್ನೂ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಡೆದ ದೋಸೋತ್ಸವ ನಿಜಕ್ಕೂ ಒಳ್ಳೆಯ ಪ್ರಯತ್ನ. ಜಿಲಾಡಳಿತದ ಈ ಪ್ರಯತ್ನ ಯಶಸ್ವಿಯಾದರೆ ಶೀಘ್ರದಲ್ಲಿಯೇ ದಾವಣಗೆರೆ ಬೆಣ್ಣೆದೋಸೆಗೆ ನ್ಯಾಷನಲ್ ಲೆವಲ್ ನಲ್ಲಿ ಬ್ರ್ಯಾಂಡಿಂಗ್ ದೊರೆಯುವುದು ಖಚಿತ.