
ದಾವಣಗೆರೆ: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ ನಡೆದಿದೆ. ಉತ್ತರ ಪ್ರದೇಶದ ಗ್ಯಾಂಗ್ ವೊಂದು ಕಾರಿನಲ್ಲಿ ದರೋಡೆಗೆ ಆಗಮಿಸಿದ್ದು, ಖಚಿತ ಮಾಹಿತಿ ಪಡೆದ ಪೊಲೀಸರು ದರೋಡೆಕೋರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿಯ ಎಸ್ ಬಿಐ ಬ್ಯಾಂಕ್ ದರೋಡೆಗೆಂದು ಎರಡು ಕಾರುಗಳಲ್ಲಿ 8 ಜನರ ಗ್ಯಾಂಗ್ ಆಗಮಿಸಿತ್ತು. ಈ ವೇಳೆ ಮಾಹಿತಿ ಪಡೆದ ಪೊಲೀಸರು ಹೊನ್ನಾಳಿ ಬಳಿಯ ಅರಬಘಟ್ಟ ಕ್ರಾಸ್ ನಲ್ಲಿ ದರೋಡೆಕೋರರ ಕಾರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದರೋಡೆಕೋರರು ಮಚ್ಚು-ಲಾಂಗ್ ಬೀಸಿದ್ದಾರೆ. ಓರ್ವ ಕಾನ್ಸ್ ಟೇಬಲ್ ಗಂಭೀರವಾಗಿ ಹಲ್ಲೆಗೊಳಗಾಗಿದ್ದಾರೆ.
ತಕ್ಷಣ ಪೊಲೀಸರು ದರೋಡೆಕೋರರ ಗ್ಯಾಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಓರ್ವನ ಕಾಲಿಗೆ ಗುಂಡೇಟು ತಗುಲಿದ್ದು, ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾವಣಗೆರೆ ಎಸ್ ಪಿ ಉಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.