
ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಾಭಾರಣ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಆರು ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಬಳಿ ಬಾವಿಯಲ್ಲಿ ಕದ್ದಿದ್ದ ಬಂಗಾರವನ್ನು ದರೋಡೆಕೋರರು ಹೂತಿಟ್ಟಿದ್ದರು. ಕಳ್ಳತನ ಮಾಡಿದ್ದ 17 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ದರೋಡೆ ಪ್ರಕರಣದ ಕಿಂಗ್ ಪಿನ್ ವಿಜಯ್ ಕುಮಾರ್ ನ್ಯಾಮತಿ ಬಳಿ ಬೇಕರಿ ಇಟ್ಟುಕೊಂಡಿದ್ದ. ಸಾಲ ಪಡೆಯಲು ಎರಡು ಬಾರಿ ಅರ್ಜಿ ಹಾಕಿದರೂ ಸಾಲ ನೀಡಲು ಬ್ಯಾಂಕ್ ತಿರಸ್ಕರಿಸಿತ್ತು. ಸಾಲ ಸಿಗದ ಕಾರಣಕ್ಕೆ ಹಿಂದಿ ವೆಬ್ ಸಿರೀಸ್ ನೋಡಿ ದರೋಡೆ ಮಾಡಲು ಸಂಚು ರೂಪಿಸಿ ಅದರಂತೆ ಪಕ್ಕ ಪ್ಲಾನ್ ಮಾಡಿ ದರೋಡೆ ನಡೆಸಿದ್ದರು.
ಯಾವುದೇ ಸಾಕ್ಷಿಗಳು ಸಿಗಬಾರದು ಎಂಬ ಕರಣಕ್ಕೆ ದರೋಡೆಕೋರರು ಮೊಬೈಲ್, ವಾಹನಗಳನ್ನು ಕೂಡ ಬಳಸಿರಲಿಲ್ಲ. ಹೀಗೆ ದರೋಡೆ ಮಾಡಿದ್ದ 17 ಕೆಜಿ ಚಿನ್ನಾಭರಣಗಳನ್ನು ತಮಿಳುನಾಡಿನ ಮಧುರೈ ಬಳಿ ತೋಟದ ಮನೆಯ ಪಾಳು ಬಾವಿಯಲ್ಲಿ ಹೂತಿಟ್ಟಿದ್ದರು. ದರೋಡೆ ಮೊದಲು ಹಾಗೂ ನಂತರ ಗಡಿ ಚೌಡಮ್ಮನ ಅಷ್ಟದಿಗ್ಬಂಧನ ಪೂಜೆ ಮಾಡಿಸಿದ್ದರು. ದರೋಡೆ ಬಗ್ಗೆ ಕುಟುಂಬದ ಜೊತೆಯೂ ಯಾವುದೇ ಸುಳಿವು ನೀಡಿರಲಿಲ್ಲ ಆರೋಪಿಗಳು. ಆದಾಗ್ಯೂ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಮೂಲಕ ಆರೋಪಿಗಳನ್ನು ಪತ್ತೆ ಮಾಡಿ ಆರು ಖದೀಮರನ್ನು ಬಂಧಿಸಿದ್ದಾರೆ.