ದಾವಣಗೆರೆ : ಗಣರಾಜ್ಯೋತ್ಸವದ ಅಮೃತಕಾಲದ ಅಂಗವಾಗಿ ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಜನವರಿ 26 ರಿಂದ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅತ್ಯಂತ ಯಶಸ್ವಿಯಾಗಿ ಜಾಥಾ ನಡೆಸಿದ ದಾವಣಗೆರೆ ಜಿಲ್ಲೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಶಸ್ವಿ ಅನುಷ್ಠಾನ ಪ್ರಶಸ್ತಿ ನೀಡಿದರು.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅವರು ಸ್ವೀಕರಿಸಿದರು, ರೂ. ಒಂದು ಲಕ್ಷ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇವರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಕೆ.ನಾಗರಾಜ್ ಉಪಸ್ಥಿತರಿದ್ದರು.
ಸಂವಿಧಾನ ಜಾಗೃತಿ ಜಾಥಾವನ್ನು ದಾವಣಗೆರೆ ಜಿಲ್ಲೆಯಲ್ಲಿ ಜನವರಿ 26 ರಿಂದ ಆರಂಭವಾಗಿ ಫೆಬ್ರವರಿ 23 ರ ವರೆಗೆ ಜಿಲ್ಲೆಯ ಎಲ್ಲಾ 194 ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನ, 7 ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜಾಥಾ ಏರ್ಪಡಿಸುವ ಮೂಲಕ ಸಂವಿಧಾನ ನೀಡಿರುವ ಅವಕಾಶಗಳು, ವರ್ಗ ರಹಿತ ಸಮ ಸಮಾಜದ ನಿರ್ಮಾಣ, ಜಾತ್ಯಾತೀತ ನಿಲುವುಗಳು, ಸಮಾನತೆ, ಭ್ರಾತೃತ್ವ ಕುರಿತಂತೆ ಸಂವಿಧಾನದ ಪ್ರಸ್ತಾವನೆ ಪ್ರತಿಜ್ಞೆ ಕುರಿತು ಜಾಗೃತಿ ಮೂಡಿಸಲಾಯಿತು. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರನ್ನು ಜಾಥಾ ಸಂದರ್ಭದಲ್ಲಿ ತೊಡಗಿಸಿಕೊಳ್ಳುವಂತೆ ಜನ ಜಾಗೃತಿ ಮೂಡಿಸಲಾಯಿತು.