ದಾವಣಗೆರೆ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ಸೇವೆ ನೀಡುವ ಯೋಜನೆ ಈಗಾಗಲೆ ಜಾರಿಯಲ್ಲಿದ್ದು, ಪ್ರತಿ ತಿಂಗಳು ಜಿಲ್ಲೆಯಲ್ಲಿ ಕನಿಷ್ಟ 80 ಸಾವಿರ ಜನರಿಗೆ ಎಬಿಎಆರ್‍ಕೆ ಕಾರ್ಡ್ ವಿತರಿಸುವ ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಬಿಎಆರ್‍ಕೆ ಯೋಜನೆ ಕುರಿತ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಕುಂದುಕೊರತೆ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಬಿಎಆರ್‍ಕೆ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಸರ್ಕಾರಿ ಅಥವಾ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ಸೇವೆ ನೀಡುವ ಯೋಜನೆಯನ್ನು ಬಡವರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿದೆ. ಈ ಮೊದಲು ಯೋಜನೆಯಡಿ ಸೌಲಭ್ಯ ಪಡೆಯಲು, ಎಬಿಎಆರ್‍ಕೆ ಕಾರ್ಡ್ ಜೊತೆಗೆ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ಸಲ್ಲಿಸಬೇಕಿತ್ತು. ಆದರೆ ಯೋಜನೆಯನ್ನು ಸರಳೀಕರಣಗೊಳಿಸಿ, ಸೌಲಭ್ಯವನ್ನು ಬಡವರು ಸುಲಭವಾಗಿ ಪಡೆಯುವಂತಾಗಲು, ಕೇವಲ ಎಬಿಎಆರ್‍ಕೆ ಕಾರ್ಡ್ ಮಾತ್ರ ಸಲ್ಲಿಸಿದರೆ ಸಾಕು, ಉಳಿದ ಯಾವುದೇ ದಾಖಲೆಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ.
ಈ ಆದೇಶದಂತೆ ಸಾರ್ವಜನಿಕರು ಎಬಿಎಆರ್‍ಕೆ ಯೋಜನೆಯ ಸೌಲಭ್ಯ ಪಡೆಯಲು, ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರ ಶಿಫಾರಸು ಪತ್ರದ ಜೊತೆಗೆ ಕೇವಲ ಎಬಿಎಆರ್‍ಕೆ ಕಾರ್ಡ್ ಮಾತ್ರ ದಾಖಲೆಯಾಗಿ ಸಲ್ಲಿಸಿದರೆ ಸಾಕು. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ಖಾಸಗಿ ಆಸ್ಪತ್ರೆಗಳು ಈ ಆದೇಶವನ್ನು ತಪ್ಪದೆ ಪಾಲಿಸಬೇಕು. ವಿನಾಕಾರಣ, ಯಾರನ್ನೂ ಇತರೆ ದಾಖಲೆ ಕೋರಿ ಅಲೆದಾಡಿಸುವುದಾಗಲಿ, ಸೇವೆಯನ್ನು ನಿರಾಕರಿಸುವುದಾಗಲಿ ಮಾಡುವಂತಿಲ್ಲ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಪ್ರಮುಖ ಸ್ಥಳದಲ್ಲಿ ಎಬಿಎಆರ್‍ಕೆ ಯೋಜನೆಗೆ ಸಂಬಂಧಿಸಿ ಸಂಪರ್ಕಿಸಬೇಕಾದ ಆರೋಗ್ಯ ಮಿತ್ರ ಸಂಪರ್ಕ ಸಂಖ್ಯೆ ಹಾಗೂ ವಿವರವನ್ನು ದೊಡ್ಡ ಬೋರ್ಡ್‍ನಲ್ಲಿ ನಮೂದಿಸಿ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಡಿಹೆಚ್‍ಒ ಡಾ. ನಾಗರಾಜ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಐಎಂಎ ಅಧ್ಯಕ್ಷ ಡಾ. ಸೋಮಶೇಖರ್, ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್ ಸೇರಿದಂತೆ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು, ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.