ದಾವಣಗೆರೆ: ಮಕರ ಸಂಕ್ರಾಂತಿ ಹಬ್ಬದ ದಿನವೇ ರಾಜ್ಯದಲ್ಲಿ ಸಾಲು ಸಾಲು ಅಪಘಾತ ಪ್ರಕರಣಗಳು ನಡೆದಿದ್ದು, ಬೊಲೆರೊ ವಾಹನ ಪಲ್ಟಿಯಾಗಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಬಳಿ ನಡೆದಿದೆ.
ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಡಿಕೆ ಕೊಯ್ಲು ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದ ವೇಳೆ ಬೊಲೆರೊ ವಾಹನಕ್ಕೆ ಹಸು ಅಡ್ದಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಬೊಲೆರೊ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಚಂದನಕೆರೆಯ ನಾಗರಾಜ್ (38), ಗೌತಮ್ (17) ಹಾಗೂ ಮಂಜುನಾಥ್ (45) ಮೃತ ದುರ್ದೈವಿಗಳು. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.