ಇಡೀ ದೇಶದ ಗಮನಸೆಳೆದ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥೆ ಪ್ರತಿಕ್ರಿಯೆ ನೀಡಿದ್ದು, ಶಾಸಕರ ಪುತ್ರ, ಇತರರು ನನ್ನ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾರೆ. ಅವರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾಳೆ.
16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಜೋಹರಿ ಲಾಲ್ ಮೀನಾ ಅವರ ಪುತ್ರ ಮತ್ತು ಇತರ ನಾಲ್ವರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಕಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡದಿದ್ದರೆ, ಅವರು ಆರೋಪದಿಂದ ಮುಕ್ತರಾದರೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದಿದ್ದಾಳೆ.
ಆರೋಪಿಗಳಲ್ಲಿ ಒಬ್ಬನಾದ ವಿವೇಕ್ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ, ಅವನು ಶಾಲೆಯಲ್ಲಿ ನನ್ನ ಜೊತೆಗಿದ್ದ ಹುಡುಗಿಯ ಸಹೋದರನಾಗಿದ್ದ. ಆತನೇ ನನ್ನನ್ನು ಕಾಂಗ್ರೆಸ್ ಶಾಸಕ ಜೋಹಾರಿ ಲಾಲ್ ಮೀನಾ ಅವರ ಮಗ ದೀಪಕ್ ಮೀನಾಗೆ ಪರಿಚಯಿಸಿದ್ದ. ಆರೋಪಿಗಳು ನನ್ನನ್ನು ಹೋಟೆಲ್ಗೆ ಕರೆದೊಯ್ದರು. ಆರೋಪಿಗಳು ಹೋಟೆಲ್ ನಲ್ಲಿ ನನ್ನ ವಿಡಿಯೋ ಮಾಡಿ ನಂತರ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಹೇಳಿದ್ದಾಳೆ.
ಆರೋಪಿಗಳು ವಿಡಿಯೋಗಳನ್ನು ಸೋರಿಕೆ ಮಾಡುವುದಾಗಿ ಬೆದರಿಸಿ 15 ಲಕ್ಷ ರೂಪಾಯಿ ನಗದು, ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಪೊಲೀಸರು ಪ್ರಕರಣವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.
ಆರೋಪಿಗಳು ಕುಟುಂಬಕ್ಕೆ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದು, ಕಳೆದ ವರ್ಷ ಹಣ ನಾಪತ್ತೆಯಾದಾಗ ಕಳ್ಳತನ ಪ್ರಕರಣ ದಾಖಲಿಸಿದ ಬಳಿಕ ಪೊಲೀಸರೂ ಅದನ್ನು ಹತ್ತಿಕ್ಕಲು ಯತ್ನಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆರೋಪಿಗೆ ಆಭರಣಗಳನ್ನು ಕೊಟ್ಟ ಬಗ್ಗೆ ಪೋಷಕರು ಪ್ರಶ್ನಿಸಿದಾಗ ಅತ್ಯಾಚಾರ ಪ್ರಕರಣದ ಬಗ್ಗೆ ಹೇಳಿದ್ದಾಳೆ ಎನ್ನಲಾಗಿದೆ.
ಇನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್ಸಿಪಿಸಿಆರ್) ಮತ್ತು ರಾಜ್ಯ ಮಹಿಳಾ ಆಯೋಗದ ಸದಸ್ಯರು ಸೋಮವಾರ ದೌಸಾದಲ್ಲಿ ಬಾಲಕಿಯನ್ನು ಭೇಟಿ ಮಾಡಿದ್ದು, ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಲಾಗಿದೆ.