ತಾಯಿಗೆ ನಾಗರಹಾವು ಕಚ್ಚಿದ ಸಂದರ್ಭದಲ್ಲಿ ಮಗಳು ತೋರಿದ ಸಮಯ ಪ್ರಜ್ಞೆಯಿಂದಾಗಿ ಮರುಜನ್ಮ ಸಿಕ್ಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಘಟನೆಯ ವಿವರ: ಎಟ್ಯಡ್ಕ ನಿವಾಸಿ ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ ಎಂಬವರು ವಾರದ ಹಿಂದೆ ತಮ್ಮ ತೋಟಕ್ಕೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಅವರ ಕಾಲಿಗೆ ನಾಗರಹಾವು ಕಚ್ಚಿತ್ತು.
ಗಾಬರಿಗೊಂಡ ಅವರು ಕೂಡಲೇ ಮನೆಗೆ ಓಡೋಡಿ ಬಂದಿದ್ದು, ಮಗಳು ಶ್ರಮ್ಯ ರೈ ಬಳಿ ಹಾವು ಕಚ್ಚಿದ ವಿಷಯ ತಿಳಿಸಿದ್ದಾರೆ. ಆಗ ತಕ್ಷಣವೇ ಸಮಯಪ್ರಜ್ಞೆ ಮೆರೆದ ಮಗಳು ಹಾವು ಕಚ್ಚಿದ ಜಾಗವನ್ನು ಗುರುತಿಸಿ ತನ್ನ ಬಾಯಿಂದ ಬಲವಾಗಿ ಚೀಪಿ ವಿಷಪೂರಿತ ರಕ್ತವನ್ನು ಹೊರ ಉಗುಳಿದ್ದಾರೆ.
ಇದೇ ರೀತಿ ಮೂರ್ನಾಲ್ಕು ಬಾರಿ ಮಾಡಿದ್ದು ಬಳಿಕ ವೈದ್ಯರ ಬಳಿ ಕರೆದೊಯ್ಯಲಾಗಿದೆ. ಅವರ ಶಿಫಾರಸ್ಸಿನಂತೆ ನಂತರ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಮಗಳು ಸಕಾಲದಲ್ಲಿ ವಿಷವನ್ನು ಹೊರ ತೆಗೆದಿದ್ದರಿಂದ ಅದು ದೇಹಕ್ಕೆ ವ್ಯಾಪಿಸಿರಲಿಲ್ಲ. ಹೀಗಾಗಿ ಮಮತಾ ಬಹುಬೇಗನೆ ಚೇತರಿಸಿಕೊಂಡಿದ್ದಾರೆ.
ಸಮಯ ಪ್ರಜ್ಞೆ ಮೆರೆದು ತಾಯಿ ಮಮತಾ ಅವರ ಪ್ರಾಣ ಉಳಿಸಿದ ಶ್ರಮ್ಯ ರೈ ಅವರ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈಕೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ.