ಧಾರ್(ಮಧ್ಯಪ್ರದೇಶ): ಮದುವೆ ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ಎಲ್ಲಿಯೋ ಇರುವ ವಧು, ಇನ್ನೆಲ್ಲಿಯೋ ಇರುವ ವರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವುದನ್ನು ನೋಡಬಹುದು. ಅಂಥದ್ದೇ ಒಂದು ಕುತೂಹಲದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಅದೀಗ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ ನಿವಾಸಿ ಆಶ್ ಹಾನ್ಸ್ಚೈಲ್ಡ್ ಮತ್ತು ಮಧ್ಯಪ್ರದೇಶದ ಮನವಾರ್ ನಿವಾಸಿ ತಬಸ್ಸುಮ್ ಹುಸೇನ್ ನಡುವಿನ ಪ್ರೇಮವಿವಾಹದ ಘಟನೆಯಿದು. ಈ ಮದುವೆಗಾಗಿ ವರ ಇಡೀ ಕುಟುಂಬದೊಂದಿಗೆ 10,000 ಕಿಲೋ ಮೀಟರ್ ಪ್ರಯಾಣಿಸಿ ಮಧ್ಯಪ್ರದೇಶ ತಲುಪಿ ಬಳಿಕ ಮದುವೆಯಾಗಿದ್ದಾನೆ.
ಅಂದಹಾಗೆ, ಇವರ ಪ್ರೀತಿ ಹುಟ್ಟಿದ್ದೇ ರೋಚಕ. ತಬಸ್ಸುಮ್ ತಂದೆ ಸಾದಿಕ್ ಹುಸೇನ್ ಸಣ್ಣ ಸೈಕಲ್ ರಿಪೇರಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. 2016ರಲ್ಲಿ ತಬಸ್ಸುಮ್ ಉನ್ನತ ಶಿಕ್ಷಣಕ್ಕೆಂದು ಸರ್ಕಾರದ 45 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ನೀಡಿತ್ತು. ಆಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಕಾಲೇಜಿಗೆ ಸೇರಿದ್ದರು.
ಅಲ್ಲಿ ಅವರಿಗೆ ಆಶ್ ಪರಿಚಯವಾಗಿ, ಪ್ರೇಮಕ್ಕೆ ತಿರುಗಿದೆ. ಆದರೆ ತಮ್ಮ ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂದು ತಬಸ್ಸುಮ್ ಅಂದುಕೊಂಡಿದ್ದರು. ಆದರೆ ಇಬ್ಬರ ಮನೆಯಲ್ಲಿಯೂ ಮದುವೆಗೆ ಸಮ್ಮತಿಸಿದ್ದರಿಂದ ಈ ಮದುವೆ ನಡೆದಿದೆ.