
ಮೈಸೂರು: ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ 13 ತಿಂಗಳ ನಂತರ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಪುತ್ರಿ ಹಾಗೂ ಅಳಿಯನನ್ನು ವರುಣಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದ ಶಾರದಮ್ಮ(45) ಮಗಳಿಂದಲೇ ಕೊಲೆಯಾದವರು. ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದ ಶಾರದಮ್ಮ ಅವರಿಗೆ ಚಿಕಿತ್ಸೆ ಕೊಡಿಸಲು ಪುತ್ರಿ ಅನುಷಾ ವಿಳಂಬ ಮಾಡಿದ್ದಳು. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಜಗಳದ ವೇಳೆ ತಾಯಿಯನ್ನು ನೂಕಿದ್ದಾಳೆ. ಆಗ ಶಾರದಮ್ಮನ ತಲೆ ಮಂಚಕ್ಕೆ ತಗುಲಿ ಸಾವನ್ನಪ್ಪಿದ್ದಾರೆ. ಪತಿ ಜೊತೆ ಸೇರಿ ತಾಯಿಯ ಶವವನ್ನು ಗ್ರಾಮದ ಸ್ಮಶಾನದಲ್ಲಿ ಗುಂಡಿ ತೋಡಿ ಹೂತು ಹಾಕಿದ್ದಾರೆ.
ಶಾರದಮ್ಮ ಕಾಣದಿದ್ದಾಗ ಸಂಬಂಧಿಕರು ವಿಚಾರಿಸಿದ್ದಾರೆ. ನಂತರ ಒತ್ತಡಕ್ಕೆ ಮಣಿದು ಅನುಷಾ ತಾಯಿ ನಾಪತ್ತೆಯಾದ ಬಗ್ಗೆ ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಅನುಷಾ ತಾಯಿ ಕೊಲೆ ಮಾಡಿರುವುದು ಗೊತ್ತಾಗಿದೆ.