ಹೆಲ್ಮೆಟ್ ಧರಿಸುವ ನಿಯಮ ಪಾಲಿಸದೇ ಇರುವ ಕಾರಣ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಿವೆ. ಬೈಕ್ ಚಾಲನೆ ಮಾಡುವ ವೇಳೆ ಹೆಲ್ಮೆಟ್ ಧಾರಣೆಯನ್ನು ಸರ್ಕಾರ ಕಡ್ಡಾಯಗೊಳಿಸಿದರೂ ಸಹ ಈ ಬಗ್ಗೆ ಸವಾರರು ನಿರ್ಲಕ್ಷ್ಯದ ಧೋರಣೆ ತೋರುವುದು ಸಾಮಾನ್ಯವಾಗಿದೆ. ಹಿಂಬದಿ ಸವಾರರಿಗೂ ಸಹ ಹೆಲ್ಮೆಟ್ ಧಾರಣೆ ಕಡ್ಡಾಯವೆಂದು ಕೊರ್ಟ್‌ಗಳೂ ಆದೇಶ ಕೊಟ್ಟರೂ ಈ ವಿಚಾರದಲ್ಲಿ ಹೇಳಿಕೊಳ್ಳುವ ಬದಲಾವಣೆ ಏನೂ ಆಗಿಲ್ಲ.
ಇತ್ತೀಚಿನ ನಿದರ್ಶನವೊಂದರಲ್ಲಿ, ಮಧ್ಯ ಪ್ರದೇಶದ ಯುವತಿಯೊಬ್ಬರು ಹೆಲ್ಮೆಟ್ ಧರಿಸದೇ ಸ್ಕೂಟರ್ ಸವಾರಿ ಮಾಡಿದ ವೇಳೆ ಅಫಘಾತದಿಂದ ಮೃತಪಟ್ಟಿದ್ದಾರೆ. ಆಕೆಯ ಸಾವಿನ ಶೋಕದ ಸಂದರ್ಭದಲ್ಲಿ ಆಕೆಯ ಕುಟುಂಬಸ್ಥರು ಹೆಲ್ಮೆಟ್ ಇಲ್ಲದ ಸವಾರರಿಗೆ ಹೆಲ್ಮೆಟ್ ಹಂಚುತ್ತಾ ಮಾದರಿಯಾಗಿದ್ದಾರೆ.
ಖರ್ಗೋನೆ ಜಿಲ್ಲೆಯ ಜ಼ಿರ್ನಿಯಾ ಎಂಬ ಹಳ್ಳಿಯಲ್ಲಿ ಈ ಯುವತಿ ತನ್ನ ಸಹೋದರನೊಂದಿಗೆ ಬೈಕ್ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವೇಳೆ ಅಪಘಾತವುಂಟಾಗಿ ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ.
ಮಗಳ ಸಾವಿಗೆ ಶೋಕ ಸೂಚಿಸುವ ವೇಳೆ ಹೆಲ್ಮೆಟ್ ಧಾರಣೆ ಕುರಿತು ಜಾಗೃತಿ ಮೂಡಿಸಲೆಂದು ಆಕೆಯ ಕುಟುಂಬಸ್ಥರು 40 ಹೆಲ್ಮೆಟ್‌ಗಳನ್ನು ಹಂಚಿದ್ದಾರೆ.
ಸಂಚಾರೀ ಪೊಲೀಸರು ಹೆಲ್ಮೆಟ್ ಇಲ್ಲದ ಸವಾರರಿಗೆ ದಂಡ ವಿಧಿಸುತ್ತಲೇ ಬಂದಿದ್ದರೂ ಸಹ ಅವರ ಕಾವಲಿಲ್ಲದ ಕಡೆಗಳಲ್ಲಿ ಹೆಲ್ಮೆಟ್ ಹಾಕದೇ ಓಡಾಡುವುದು ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ.