ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಡೆದಿದ್ದ ದತ್ತ ಜಯಂತಿ ಕಾರ್ಯಕ್ರಮದ ವೇಳೆ ರಸ್ತೆಯಲ್ಲಿ ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಬಂಧಿತ ಆರೋಪಿಗಳು. ಹಾರ್ಡ್ ವೇರ್ ಶಾಪ್ ನಲ್ಲಿ 4 ಕೆ ಜಿ ಮೊಳೆ ಖರೀದಿಸಿದ್ದ ಆರೋಪಿಗಳು ದತ್ತಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿದ್ದರು. ಮೊಳೆಗಳಿಂದಾಗಿ ಹಲವು ವಾಹನಗಳು ಪಂಕ್ಚರ್ ಆಗಿದ್ದವು.
ಡಿಸೆಂಬರ್ 6, 7 ಹಾಗೂ 8 ರಂದು ನಡೆದಿದ್ದ ದತ್ತ ಜಯಂತಿ ವೇಳೆ ಈ ಘಟನೆ ನಡೆದಿತ್ತು. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.