ಬೆಂಗಳೂರು: ರಾಜ್ಯದಲ್ಲಿ ಶಾಲೆಗಳಿಗೆ ನೀಡಿರುವ ದಸರಾ ರಜೆಯನ್ನು ಅ. 31ರವರೆಗೆ ವಿಸ್ತರಿಸಬೇಕು. 15 ದಿನಗಳ ರಜೆ ಸಾಲದು, ಮೊದಲಿನಂತೆ 29 ದಿನ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಶಿಕ್ಷಣ ಇಲಾಖೆ ಆಯುಕ್ತರಿಗೆ ಸಂಘದ ಅಧ್ಯಕ್ಷ ಸಿದ್ಧಬಸಪ್ಪ ಈ ಕುರಿತಾಗಿ ಪತ್ರ ಬರೆದಿದ್ದಾರೆ. ಮೊದಲಿನಿಂದಲೂ ಶಾಲೆಗಳಿಗೆ ಅ.3ರಿಂದ 31ರವರೆಗೆ ನೀಡುವ ಮೂಲಕ ನಾಡಿನ ಪರಂಪರೆ, ಆಚರಣೆಗಳನ್ನು ನೋಡಲು, ತಿಳಿಯಲು ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ದಸರಾ ರಜೆಯ ಅವಧಿಯನ್ನು ಅರ್ಧದಷ್ಟು ಕಡಿತ ಮಾಡಲಾಗಿದೆ. ಇದರಿಂದ ಮಕ್ಕಳು ಶಿಕ್ಷಕರಿಗೆ ಇದ್ದ 230 ಶಾಲಾ ದಿನಗಳು 260 ದಿನಗಳಿಗೆ ಏರಿಕೆಯಾಗಿದ್ದು, ಅವೈಜ್ಞಾನಿಕ ಕ್ರಮವನ್ನು ಪುನರ್ ಪರಿಶೀಲಿಸಿ ಮೊದಲಿನಂತೆ ಅ. 31 ರವರೆಗೆ ದಸರಾ ರಜೆ ವಿಸ್ತರಿಸಬೇಕೆಂದು ಹೇಳಿದ್ದಾರೆ.
ಸಭಾಪತಿಗಳಿಂದಲೂ ಸಲಹೆ:
ಮಕ್ಕಳ ಹಿತ ದೃಷ್ಟಿಯಿಂದ ನವೆಂಬರ್ 1ರವರೆಗೂ ದಸರಾ ರಜೆ ವಿಸ್ತರಣೆ ಮಾಡಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ ಸಲಹೆ ನೀಡಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅ. 2ರಿಂದ 30ರವರೆಗೆ ಶೈಕ್ಷಣಿಕ ವರ್ಷದ ಮೊದಲ ಅವಧಿಯ ದಸರಾ ರಜೆ ಇರುತ್ತಿತ್ತು. ಹಿಂದಿನ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ಹೇಳಿದ್ದಾರೆ.