ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಗಣ್ಯರ ಸಾಲಿನಲ್ಲಿ ರೌಡಿಶೀಟರ್ ಪ್ರಕಾಶ ಮುಧೋಳ ಕುಳಿತುಕೊಂಡಿರುವುದು ಬಾಗಲಕೋಟೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ಹೆಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್ ಕೂತಿದ್ದ ವಿಐಪಿ ಸಾಲಿನಲ್ಲಿ ಪ್ರಕಾಶ್ ಮುಧೋಳ ಕಾಣಿಸಿಕೊಂಡಿದ್ದಾನೆ. ಡಿಸಿಎಂ ಡಿ.ಕೆ. ಎಂಎಲ್ಸಿ ಯತೀಂದ್ರ ಜೊತೆಗೆ ಪ್ರಕಾಶ್ ಮುಧೋಳ ಸೆಲ್ಫಿ ತೆಗೆದುಕೊಂಡಿದ್ದಾನೆ.
ಗಣ್ಯರ ಸಾಲಿನಲ್ಲಿ ಆತ ಆಸನ ಪಡೆದಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಗಣ್ಯರ ಸಾಲಿನಲ್ಲಿ ಆತನನ್ನು ಹೇಗೆ ಕೂರಿಸಿದರು ಎಂದು ಬಾಗಲಕೋಟೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬಾಗಲಕೋಟೆ ತಾಲೂಕಿನ ಸೀಮೆಕೇರಿ ರಾಮರೂಢಮಠದ ಶ್ರೀಗಳಿಗೆ ಬೆದರಿಕೆ ಹಾಕಿ ಒಂದು ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದ ರೌಡಿಶೀಟರ್ ಪ್ರಕಾಶ ಮುಧೋಳನನ್ನು ಬಂಧಿಸಲಾಗಿತ್ತು.
ಎಡಿಜಿಪಿ ಹೆಸರಿನಲ್ಲಿ ಕರೆ ಮಾಡಿ ವಂಚನೆ ಮಾಡಿದ್ದ ಆತನನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದರು. ನಾಲ್ಕು ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿರುವ ಪ್ರಕಾಶ ಮುಧೋಳ ಇವಾಗ ದಸರಾ ಕಾರ್ಯಕ್ರಮದ ಗಣ್ಯರ ವೇದಿಕೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ.
2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ್ದ. ಸಚಿವ ತಿಮ್ಮಾಪುರ ಅಳಿಯ ಎಂದು ಕಾರು ಲೋನ್ ಪಡೆದುಕೊಳ್ಳಲು ಯತ್ನಿಸಿದ್ದ. ವಂಚನೆ ಸುಲಿಗೆ ಸೇರಿದಂತೆ ಪ್ರಕಾಶ ಮುಧೋಳ ವಿರುದ್ಧ 11 ಕೇಸುಗಳು ಇವೆ. ಇಂತಹ ವ್ಯಕ್ತಿ ದಸರಾದಲ್ಲಿ ಗಣ್ಯರ ಸಾಲಿನಲ್ಲಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.