ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ತಂಡದ ಸದಸ್ಯರ ಮೊಬೈಲ್ ಕರೆಗಳ ವಿವರ, ವಾಟ್ಸಾಪ್ ಅನ್ನು ತಾಂತ್ರಿಕ ತಜ್ಞರು ಪರಿಶೀಲಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಕೆಲವರು ರೌಡಿಗಳ ಸಂಪರ್ಕದಲ್ಲಿ ಇರುವುದು ಗೊತ್ತಾಗಿದೆ.
ಬಂಧಿತ ಆರೋಪಿಗಳ ಆರು ತಿಂಗಳ ಮೊಬೈಲ್ ಕರೆಗಳ ವಿವರ ಪಡೆಯಲಾಗುತ್ತಿದ್ದು, ಬಂಧಿತರು ರೌಡಿಗಳ ಸಂಪರ್ಕದಲ್ಲಿರುವುದು ತನಿಖೆಯಿಂದ ಬಯಲಾಗುತ್ತಿದೆ. ಯಾವ ಉದ್ದೇಶಕ್ಕೆ ರೌಡಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುದರ ಬಗ್ಗೆಯೂ ಪರಿಶೀಲಿಸಲಾಗಿದೆ.
ದರ್ಶನ್ ಮ್ಯಾನೇಜರ್ ನಾಗರಾಜ್, ಕಾರು ಚಾಲಕ ಲಕ್ಷ್ಮಣ್ ಅವರ ಮೊಬೈಲ್ ಪರಿಶೀಲಿಸಲಾಗಿದ್ದು, ಇವರು ರೌಡಿಗಳೊಂದಿಗೆ ಚರ್ಚಿಸಿರುವ ಮಾಹಿತಿ ಗೊತ್ತಾಗಿದೆ. ದರ್ಶನ್ ಬೇರೆ ಬೇರೆ ಜಿಲ್ಲೆಗಳಿಗೆ ಪ್ರಚಾರಕ್ಕೆ ತೆರಳಿದ್ದಾಗ ಆಯಾ ಭಾಗದಲ್ಲಿ ಅಭಿಮಾನಿಗಳನ್ನು ಸೇರಿಸಲು ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದವರ ಜೊತೆ ಮಾತುಕತೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.