ಚಿಕ್ಕಮಗಳೂರು: ನಟ ದರ್ಶನ್ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ದರ್ಶನ್ ಮತ್ತು ಸಹಚರರಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಲ್ಲ ಎಂಬುದು ನಟ ದರ್ಶನ್ ಪ್ರಕರಣ ನೋಡಿದಾಗ ನಿಜ ಅನ್ನಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷ ರೇಣುಕಾಸ್ವಾಮಿ ಕುಟುಂಬದವರ ಜೊತೆ ಇರುತ್ತದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಎಸಗುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು. ರಾಜಕಾರಣಿಗಳ ಮೇಲೆ ಸಾಕಷ್ಟು ಟೀಕೆಗಳು ಬರುತ್ತಿರುತ್ತವೆ. ಹಾಗಂತ ಇದೇ ರೀತಿ ಮಾಡಲು ಹೋಗಿದ್ದರೆ ಗಂಟೆಗೊಂದು ಹೆಣ ಬೀಳುತ್ತಿತ್ತು. ಇಂತಹ ಕ್ರೌರ್ಯವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರಿಗೆ ರಾಜ ಮರ್ಯಾದೆ ಕೊಡುತ್ತಿದ್ದಾರೆ ಎನ್ನುವ ಸಂದೇಶ ಒಳ್ಳೆಯದಲ್ಲ. ಬಲ ಇದ್ದವನಿಗೆ ಒಂದು ಬಡವನಿಗೆ ಒಂದು ಎಂಬ ಸಂದೇಶ ಹೋಗುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.