ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ನಟ ದರ್ಶನ್ ಸ್ಪೆಷಲ್ ಬ್ಯಾರಕ್ ನಿಂದ ಹೊರ ಬಂದು ಟೇಬಲ್, ಚೇರ್ ಹಾಕಿಕೊಂಡು ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತಿತರರ ಜೊತೆ ಸಿಗರೇಟ್ ಸೇದುತ್ತಾ, ಕಾಫಿ ಮಗ್ ಹಿಡಿದು ನಗುತ್ತಾ ಕುಳಿತಿರುವ ಫೋಟೋ ವೈರಲ್ ಆಗಿದೆ. ಅಲ್ಲದೇ ದರ್ಶನ್ ಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವ್ಯವಸ್ಥೆಯೂ ಆಗಿದೆ ಎಂದು ಹೇಳಲಾಗುತ್ತಿದೆ. ಕೊಲೆ ಆರೋಪಿಗೆ ಜೈಲಿನಲ್ಲಿ ಶಿಕ್ಷೆ ಬದಲು ರಾಜಾತಿಥ್ಯ ನೀಡುತ್ತಿರುವುದು ಗೃಹ ಇಲಾಖೆಗೆ ಮುಜುಗರವನ್ನುಂಟುಮಾಡಿದೆ.
ಘಟನೆ ಬೆಳಕಿಗೆ ಬರುತ್ತಿದಂತೆ ಬಂದಿಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿಗೆ ಕರೆ ಮಾಡಿ ವಿವರಣೆ ಕೇಳಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಇನ್ನೊಂದೆಡೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರೊಂದಿಗೆ ಸಭೆ ನಡೆಸಿದ ಗೃಹ ಸಚಿವರು ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.