ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ ನಟ ದರ್ಶನ್ ಅವರಿಗೆ ಐಟಿ ಸಂಕಷ್ಟ ಎದುರಾಗಿದೆ.
ದರ್ಶನ್ ನಿವಾಸದಲ್ಲಿ ದೊರೆತ ಅಪಾರ ಪ್ರಮಾಣದ ನಗದು ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಗೆ ಪತ್ರ ಬರೆಯಲಾಗಿದೆ. ರೇಣುಕಾ ಸ್ವಾಮಿ ಕೊಲೆ ಮಾಡಿದ ನಂತರ ಮೃತದೇಹ ವಿಲೇವಾರಿಗೆ ನಟ ದರ್ಶನ್ 30 ಲಕ್ಷ ರೂಪಾಯಿಗೆ ಡೀಲ್ ಕೊಟ್ಟಿದ್ದರು. ಆರೋಪಿಗಳ ಮನೆಯಲ್ಲಿ 70ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಕೋರಿ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆರ್.ಆರ್. ನಗರದ ದರ್ಶನ್ ನಿವಾಸದಲ್ಲಿ ಜೂ. 19ರಂದು 37.40 ಲಕ್ಷ ರೂ. ವಶಕ್ಕೆ ಪಡೆಯಲಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಂದ ಮೂರು ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಕೊಲೆ ಮಾಡಿದ ನಂತರ 3 ಲಕ್ಷ ರೂ.ಗಳನ್ನು ವಿಜಯಲಕ್ಷ್ಮಿ ಅವರಿಗೆ ಕೊಡುವಂತೆ ತಮ್ಮ ಸಹಾಯಕರ ಮೂಲಕ ದರ್ಶನ್ ಕಳುಹಿಸಿದ್ದರು. ಆ ಹಣವನ್ನು ವಿಜಯಲಕ್ಷ್ಮಿ ತನಿಖಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳ ಮನೆಯಲ್ಲಿ ಪರಿಶೀಲಿಸಿದಾಗ ನಗದು ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಪ್ರಕರಣ ಸಂಬಂಧ ಈವರೆಗೆ 160ಕ್ಕೂ ಹೆಚ್ಚು ಸಾಕ್ಷ್ಯ ಸಂಗ್ರಹಿಸಿದ್ದು, ಮತ್ತಷ್ಟು ಸಾಕ್ಷ್ಯ ಕಲೆ ಹಾಕಲು ಆರೋಪಿಗಳ ಮೊಬೈಲ್ ಪರಿಶೀಲಿಸಿದ್ದಾರೆ.
ಮೃತ ರೇಣುಕಾಸ್ವಾಮಿ ಮತ್ತು ಆರೋಪಿ ರಾಘವೇಂದ್ರ ಅವರ ಮೊಬೈಲ್ ನಾಶ ಮಾಡಲಾಗಿದೆ. ಹಲವು ಆರೋಪಿಗಳು ತಮ್ಮ ಮೊಬೈಲ್ ಗಳಲ್ಲಿದ್ದ ದತ್ತಾಂಶ ಅಳಿಸಿ ಹಾಕಿದ್ದಾರೆ. ಇದರ ಮರು ಸಂಗ್ರಹಕ್ಕೆ ತಾಂತ್ರಿಕ ನೆರವು ಕೋರಿ ಕೆಲವು ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ.
ದರ್ಶನ್ ಮತ್ತು ಪ್ರದೋಶ್ ಅವರ ಬಳಿ ಪರವಾನಿಗೆ ಪಡೆದ ಪಿಸ್ತೂಲ್ ಗಳಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವುಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಿರಲಿಲ್ಲ. ಆ ಪಿಸ್ತೂಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.