ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಬಂಧಿತರಾಗಿರುವ ದರ್ಶನ್ ಮತ್ತು ಸಹಚರರ ಕರೆದೊಯ್ದು ಸ್ಥಳ ಮಹಜರು ನಡೆಸಿದ ಬಳಿಕ ತಡರಾತ್ರಿವರೆಗೂ ಆರೋಪಿಗಳಿಗೆ ಗ್ರಿಲ್ ನಡೆಸಲಾಗಿದೆ.
ನಿನ್ನೆ ರಾತ್ರಿ ಪೊಲೀಸರು ಆರೋಪಿಗಳಿಗೆ ಅನ್ನ, ಸಾರು ನೀಡಿದ್ದು, ಊಟವಾದ ನಂತರ ತಡರಾತ್ರಿಯವರೆಗೂ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಸಿಸಿಟಿವಿ ದೃಶ್ಯ, ಸಿಡಿಆರ್, ಟವರ್ ಡಂಪ್ ಟೆಕ್ನಿಕಲ್ ಎವಿಡೆನ್ಸ್ ಗಳನ್ನು ಮುಂದಿಟ್ಟುಕೊಂಡು ಆರೋಪಿಗಳ ವಿಚಾರಣೆ ನಡೆಸಲಾಗಿದೆ. ನಟ ದರ್ಶನ್ ನನಗೇನೂ ಗೊತ್ತಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದಲ್ಲಿ ಸ್ಥಳ ಮಹಜರು
ಇಂದು ಚಿತ್ರದುರ್ಗ ನಗರದಲ್ಲಿ ಸ್ಥಳ ಮಹಜರು ನಡೆಯುವ ಸಾಧ್ಯತೆ ಇದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ. ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘು ಕರೆದೊಯ್ದು ರೇಣುಕಾ ಸ್ವಾಮಿಯನ್ನು ಅಪಹರಿಸಿದ ಸ್ಥಳ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಮಹಜರು ನಡೆಸಲಾಗುವುದು.
ಮೂರನೇ ದಿನವೂ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 17 ಆರೋಪಿಗಳನ್ನು ಮೂರನೇ ದಿನವೂ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು. ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಪವಿತ್ರಾ ಗೌಡ ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಇಂದು ಕೂಡ ಸ್ಥಳ ಮಹಜರಿಗೆ ಕರೆದೊಯ್ಯುವ ಸಾಧ್ಯತೆ ಇದೆ.
ಶವ ಸಾಗಿಸಿದ್ದ ವಾಹನ ಜಪ್ತಿ
ಇನ್ನು ಕೃತ್ಯಕ್ಕೆ ಬಳಸಿದ್ದ ದರ್ಶನ್ ಆಪ್ತರಿಗೆ ಸೇರಿದ ಸ್ಕಾರ್ಪಿಯೋ ಕಾರ್ ಮತ್ತು ಜೀಪ್ ಅನ್ನು ಪೋಲಿಸರು ಜಪ್ತಿ ಮಾಡಿದ್ದಾರೆ. ಸ್ಕಾರ್ಪಿಯೋ ಕಾರ್ ಪಟ್ಟಣಗೆರೆ ವಿನಯ್ ಹೆಸರಿನಲ್ಲಿದ್ದು, ಜೀಪ್ ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿದೆ. ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಲು ದರ್ಶನ್ ಜೀಪ್ ಪಿನಲ್ಲಿ ಬಂದಿದ್ದರು. ಸ್ಕಾರ್ಪಿಯೋ ಕಾರ್ ನಲ್ಲಿ ಮೃತದೇಹ ಸಾಗಿಸಲಾಗಿತ್ತು. ಈ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.