ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.
ನಟ ದರ್ಶನ್ ನನ್ನು ನೋಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಪ್ರತಿ ದಿನ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ನಿನ್ನೆ ಸೌಮ್ಯ ಎಂಬ ವಿಶೇಷ ಚೇತನ ಅಭಿಮಾನಿಯೊಬ್ಬರು ದರ್ಶನ್ ಅವರನ್ನು ನೋಡಲೇ ಬೇಕು ಎಂದು ಅನ್ನ-ಆಹಾರ ಬಿಟ್ಟು ಹಠ ಹಿಡಿದು ಕುಳಿತಿದ್ದಳು. ರಾಜ್ಯದ ದೂರದೂರುಗಳಿಂದ ದರ್ಶನ್ ನನ್ನು ನೋಡಲೆಂದು ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿಗೆ ಬರುತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಪೊಲೀಸರ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ಬಳಿ ಬಂದು ನನ್ನ ಭೇಟಿಗೆ ನೀವು ಕಾಯುವುದು, ಭೇಟಿಗೆ ಅವಕಾಶ ಸಿಗದೇ ನಿರಾಸೆಯಿಂದ ವಾಪಾಸ್ ಆಗುವುದು ಬೇಡ ಎಂದು ನಟ ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಜೈಲಿನಲ್ಲಿರುವ ದರ್ಶನ್, ಪೊಲೀಸರ ಮೂಲಕವೇ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದು, ನೆಚ್ಚಿನ ನಟನ ಮನವಿಗಾದರೂ ಅಭಿಮಾನಿಗಳು ಒಪ್ಪುತ್ತಾರಾ ಕಾದು ನೋಡಬೇಕಿದೆ.