ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಭೇಟಿಗೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ನ್ನು ನೋಡಲು ಬಳ್ಳಾರಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬರುತ್ತಿದ್ದಾರೆ. ಆದರೆ ದರ್ಶನ್ ಭೇಟಿಗೆ ಬಂದ ಯಾರೊಬ್ಬರಿಗೂ ಕೂಡ ದರ್ಶನ್ ನ್ನು ನೋಡಲು ಅವಕಾಶ ನೀಡಿಲ್ಲ ಎಂದು ಹೇಳಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಹಾಗೂ ಸಹಚರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.24ನೇ ಎಸಿಎಎಂ ಕೋರ್ಟ್ ಆದೇಶದ ನಂತರ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್ ಮತ್ತು ಸಹಚರರಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ದರ್ಶನ್ 6106, ಧನರಾಜ್ 6107, ವಿನಯ್ 6108, ಪ್ರದೋಶ್ 6109 ಸಂಖ್ಯೆಯನ್ನು ನೀಡಲಾಗಿದೆ. ಭದ್ರತಾ ದೃಷ್ಟಿಯಿಂದ ದರ್ಶನ್ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ.