ಬೆಂಗಳೂರು: ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ನನ್ನಿಂದ ದೊಡ್ಡ ತಪ್ಪಾಗಿದೆ. ದಯಮಾಡಿ ಬಿಟ್ಟುಬಿಡಿ. ಇನ್ನು ಮುಂದೆ ಇಂತಹ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ ಮೊದಲು ಪರಿಪರಿಯಾಗಿ ಪ್ರಾಣ ಭಿಕ್ಷೆ ಬೇಡಿದರೂ ನಟ ದರ್ಶನ್ ಮತ್ತು ಅವರ ಸಹಚರರು ನಿರ್ದಯವಾಗಿ ಹೊಡೆದು ಕೊಂದು ಹಾಕಿದ್ದಾರೆ.
ರೇಣುಕಾಸ್ವಾಮಿಯ ಸಾವಿನ ಕೊನೆಯ ಕ್ಷಣಗಳು ದರ್ಶನ್ ಮತ್ತು ಸಹಚರರ ಕ್ರೌರ್ಯವನ್ನು ಸಾರಿ ಹೇಳುವ ಫೋಟೋಗಳನ್ನು ಪೊಲೀಸರು ಆರೋಪ ಪಟ್ಟಿಗೆ ಸಾಕ್ಷಿಯಾಗಿ ಸಲ್ಲಿಸಿದ್ದಾರೆ. ಪಟ್ಟಣಗೆರೆ ಶೆಡ್ ಆವರಣದಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆ ರೇಣುಕಾಸ್ವಾಮಿ ಕುಕ್ಕರಗಾಲಿನಲ್ಲಿ ಕುಳಿತುಕೊಂಡು ದೈನೆಸಿ ಸ್ಥಿತಿಯಲ್ಲಿ ಬೇಡಿಕೊಂಡಿದ್ದಾರೆ. ಆತನ ಕೋರಿಕೆಗೆ ಕರಗದ ಪವಿತ್ರಾ ಗೌಡ, ಯಾವುದೇ ಕಾರಣಕ್ಕೂ ಅವನನ್ನು ಬಿಡಬೇಡಿ, ಕಿಲ್ ಹಿಮ್ ಎಂದು ಆರೋಪಿಗಳನ್ನು ಪ್ರಚೋದಿಸಿದ್ದರು. ರೇಣುಕಾ ಸ್ವಾಮಿಯ ಕೊನೆಯ ಕ್ಷಣದ ಫೋಟೋಗಳನ್ನು ಪ್ರಕರಣದ ಆರೋಪಿ ಪವನ್ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ್ದ. ನಂತರ ಅವುಗಳನ್ನು ಡಿಲಿಟ್ ಮಾಡಿ ಸಾಕ್ಷ್ಯ ನಾಶಪಡಿಸಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದರ್ಶನ್, ನಿನ್ನ ತಿಂಗಳ ಸಂಬಳ ಎಷ್ಟು ಎಂದು ಪ್ರಶ್ನಿಸಿದ್ದು, ಸುಮಾರು 20 ಸಾವಿರ ರೂ. ಬರುತ್ತೆ ಎಂದು ತಡವರಿಸುತ್ತ ರೇಣುಕಾ ಸ್ವಾಮಿ ಉತ್ತರಿಸಿದ್ದು, ನೀನು ತಿಂಗಳ ಪೂರ್ತಿ ದುಡಿಯುವ ಸಂಬಳ ಪವಿತ್ರಾ ಒಂದು ದಿನದ ಖರ್ಚು ಮೆಂಟೇನ್ ಗೆ ಸಾಕಾಗಲ್ಲ, ನಿನಗೆ ಪವಿತ್ರ ಬೇಕಾ ಎಂದು ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು ಎಂದು ತನಿಖೆಯಲ್ಲಿ ದೃಢಪಟ್ಟಿದೆ.