ಬೆಂಗಳೂರು: ಇದನ್ನು ಹುಚ್ಚು ಅಭಿಮಾನ ಅನ್ನಬೇಕೋ ಅಥವಾ ನೆಚ್ಚಿನ ನಟ ಎಂಬ ಕಾರಣಕ್ಕೆ ಏನು ಮಾಡಿದರೂ ಸರಿ ಎಂಬ ಅತಿಯಾದ ನಂಬಿಕೆ ಎನ್ನಬೇಕೋ ಗೊತ್ತಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿಯೊಬ್ಬ, ದರ್ಶನ್ ಗೆ ನೀಡಲಾಗಿರುವ ವಿಚಾರಣಾಧೀನ ಕೈದಿ ನಂಬರ್ ನ್ನು ವಾಹನ ರಿಜಿಸ್ಟರ್ ಮಾಡಿಸಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ನಟ ದರ್ಶನ್ ಗೆ ಜೈಲಾಧಿಕಾರಿಗಳು ವಿಚಾರಣಾಧೀನ ಕೈದಿ ನಂಬರ್ 6106 ಸಂಖ್ಯೆ ವಿತರಿಸಿದ್ದಾರೆ. ದರ್ಶನ್ ಅಭಿಮಾನಿಯೊಬ್ಬ, ಇನ್ಮುಂದೆ ಇದೇ ನಮ್ಮ ಲಕ್ಕಿ ನಂಬರ್ ಎಂದು ತನ್ನ ಗಾಡಿ ನಂಬರ್ ಅನ್ನಾಗಿ ಮಾಡಿಸಲು ಮುಂದಾಗಿದ್ದಾನೆ. ಅಯ್ಯೋ ಇದೆಂತಹ ಹುಚ್ಚಾಟ…..
ದರ್ಶನ್ ಅಭಿಮಾನಿ ಬನ್ನೂರಿನ ಧನುಷ್ ಎಂಬಾತ ದರ್ಶನ್ ಗೆ ಜೈಲಿನಲ್ಲಿ ನೀಡಿರುವ ನಂಬರ್ ನ್ನು ತನ್ನ ಗಾಡಿಗೆ ಹಾಕಿಸಲು ಆರ್.ಟಿ.ಓನಲ್ಲಿ ರಿಜಿಸ್ಟ್ರೇಷನ್ ಗೆ ಮುಂದಾಗಿದ್ದಾನೆ. ಅಷ್ಟೇ ಅಲ್ಲ, ತನ್ನ ನೆಚ್ಚಿನ ನಟ ಜೈಲು ಸೇರಿರುವುದು ನೆನೆದು ಕಣ್ಣೀರಿಟ್ಟುರ ಧನುಷ್, ದರ್ಶನ್ ಶೀಘ್ರ ಬಿಡುಗಡೆಯಾಗಲಿ ಎಂದು 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದಾನೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅಭಿಮಾನಿ ಧನುಷ್, ನಮ್ಮ ಬಾಸ್ ತಪ್ಪು ಮಾಡಿಲ್ಲ, ಅವರನ್ನು ನಾವು ಎಂದೂ ಬಿಟ್ಟುಕೊಡಲ್ಲ. ದರ್ಶನ್ ತಪ್ಪು ಮಾಡಲಿಲ್ಲ ಹಾಗಾಗಿ ಬೇಗನೇ ಬಿಡುಗಡೆಯಾಗಿ ಹೊರಬರಲಿದ್ದಾರೆ ಎಂದಿದ್ದಾನೆ.