
ದಾವಣಗೆರೆ: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ನೈತಿಕ ಪೊಲೀಸ್ ಗಿರಿ ಮೆರೆದಿದ್ದು, ಯುವಕನ ಮೇಲೆ ದರ್ಪ ತೋರಿದ್ದಾನೆ.
ಗೀತಾಂಜಲಿ ಥಿಯೇಟರ್ ಮುಂದೆ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆದಿರುವ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ, ಯುವಕನಿಗೆ ಶಿಕ್ಷೆ ನೀಡಿದ್ದಾನೆ. ದಾವಣಗೆರೆಯಲ್ಲಿ ಈ ಘಟನೆ ನಡೆದಿದೆ.
ಯುವಕನ ಬರಿಗೈ ಮೇಲೆ ಕರ್ಪೂರ ಹಚ್ಚಿ ದರ್ಶನ್ ಪೋಸ್ಟರ್ ಗೆ ಬೆಳಗುವಂತೆ ಹೇಳಿ ಬೆಳಗಿಸಿದ್ದಾನೆ. ಬಳಿಕ ಎರಡೂ ಕೈಗಳನ್ನು ಕಿವಿಗೆ ಹಿಡಿದುಕೊಂಡು ಬಸ್ಕಿ ಹೊಡೆಯುವಂತೆ ಹೇಳಿ ತಾಕೀತು ಮಾಡಿದ್ದು, ಬಸ್ಕಿ ಹೊಡೆಸಿ ದರ್ಪ ಮೆರೆದಿದ್ದಾನೆ. ದೊಡ್ಡೇಶ್ ಎಂಬ ದರ್ಶನ್ ಅಭಿಮಾನಿ ಈ ಕೃತ್ಯವೆಸಗಿದ್ದು, ಭಯಗೊಂಡ ಯುವಕ ಆತ ಹೇಳಿದಂತೆ ಮಾಡಿದ್ದಾನೆ.
ಹರಪನಹಳ್ಳಿ ಮೂಲದ ಯುವಕ ಕೆಲ ದಿನಗಳಿಂದ ನಟ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಥಿಯೇಟರ್ ಗೆ ಬಂದಿದ್ದ ಆ ಯುವಕನನ್ನು ಹಿಡಿದ ದೊಡ್ಡೇಶ್ ಎಂಬಾತ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಮುಂದೆ ನಿಲ್ಲಿಸಿ ಈ ರೀತಿ ದರ್ಪ ಮೆರೆದಿದ್ದಾನೆ.
ನಟ-ನಟಿಯರ ಅಭಿಮಾನಿಗಳು ಎಂದು ಹೇಳಿಕೊಂಡು ಈ ರೀತಿ ನೈತಿಕ ಪೊಲೀಸ್ ಗಿರಿ ಮೆರೆಯುತ್ತಿರುವ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.