ಬೆಂಗಳೂರು: ಒಂದು ಕಾಲದಲ್ಲಿ ನಟ ದರ್ಶನ್ ಹಾಗೂ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಆಪ್ತ ಸ್ನೇಹಿತರಾಗಿದ್ದರು. ಕಾರಣಾಂತರಗಳಿಂದ ದೂರವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ಅವರನ್ನು ‘ತಗಡು’ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಉಮಾಪತಿ ಶ್ರೀನಿವಾಸ್, ನಾನು ತಗಡೇ ನಿನ್ನಂತವನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಕ್ಕೆ ನಾನು ತಗಡೇ ಎಂದು ಗುಡುಗಿದ್ದರು. ಇದೀಗ ಕೊಲೆ ಕೇಸ್ ನಲ್ಲಿ ದರ್ಶನ್ ಹಾಗೂ ಗ್ಯಾಂಗ್ ಬಂಧನ ಬೆನ್ನಲ್ಲೇ ಉಮಾಪತಿ ಶ್ರೀನಿವಾಸ್, ತಾಳ್ಮೆ ಎಂಬುದು ಶಕ್ತಿ. ಈಗ ತಗಡು ಯಾರೆಂಬುದು ಗೊತ್ತಾಯಿತಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಉಮಾಪತಿ ಶ್ರೀನಿವಾಸ್, ನಮ್ಮ ಬೆರಳನ್ನು ಬೇರೆಯವರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತದೆ. ಅದೇ ರೀತಿ ನಮ್ಮ ಕಣ್ಣಿಗೆ ಚುಚ್ಚಿಕೊಂಡರೂ ನೋವಾಗುತ್ತದೆ. ಸದ್ಯ ಪೊಲೀಸ್ ಇಲಾಖೆ ಮೇಲೆ ಜನರಿಗೆ ನಂಬಿಕೆ ಬಂದಿದೆ. ದೊಡ್ಡವರಿಗೂ ಒಂದೇ ನ್ಯಾಯ. ಸಣ್ಣವರಿಗೂ ಒಂದೇ ನ್ಯಾಯ. ಮಾರುತಿ ಕಾರಲ್ಲಿ ಹೋಗುವವರಿಗೂ ಒಂದೇ ನ್ಯಾಯ. ಲ್ಯಾಂಬೋರ್ಗಿನಿ ಕಾರಲ್ಲಿ ಹೋಗುವವರಿಗೂ ಒಂದೇ ನ್ಯಾಯವಿರಬೇಕು ಎಂದು ಹೇಳಿದ್ದಾರೆ.
ತಿನ್ನುವ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಯಾವತ್ತೂ ಮಾಡಬಾರದು. ಎ2 ಆರೋಪಿ ಸ್ವಲ್ಪ ಯೋಚಿಸಬೇಕಿತ್ತು. ತಾಳ್ಮೆ ಎಂಬುದು ಬಹಳ ಮುಖ್ಯ. ನಾನು ಮೊದಲು ದರ್ಶನ್ ಗುಂಪಿನಲ್ಲಿದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗೋದಿಲ್ಲ. ಒಮ್ಮೆ ತಪ್ಪು ಮಾಡಿದಾಗ ಎಚ್ಚೆತ್ತುಕೊಂಡು ತಿದ್ದಿ ನಡೆಯಬೇಕು. ಮತ್ತೆ ಮತ್ತೇ ತಪ್ಪುಗಳನ್ನು ಮಾಡುತ್ತಾ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.