
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟ ದರ್ಶನ್ ಕೇಸ್ ವಿಚಾರವಾಗಿ ಶಾಸಕರು, ಸಚಿವರು, ಸದಸ್ಯರು ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದರೂ ಮದ್ದೂರು ಶಾಸಕ ಕದಲೂರು ಉದಯ್ ಗೌಡ, ದರ್ಶನ್ ಪರ ಬ್ಯಾಟ್ ಬೀಸಿದ್ದು, ದರ್ಶನ್ ಕೊಲೆ ಮಾಡುವಂತಹ ವ್ಯಕ್ತಿಯಲ್ಲ ಎಂದು ಸಮರ್ಥಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಉದಯ್ ಗೌಡ, ನಟ ದರ್ಶನ್ ಒಳ್ಳೆಯ ವ್ಯಕ್ತಿತ್ವವಿರುವ ವ್ಯಕ್ತಿ. ಕೊಲೆಗೆಡುಕನಲ್ಲ. ಸ್ವಲ್ಪ ಸಿಟ್ಟು, ಸಿಡಿಕಿನ ಸ್ವಭಾವವಷ್ಟೇ. ಅದು ಅವರಿಗೆ ಕಿರಿಕಿರಿಯಾದಾಗ ಸ್ವಲ್ಪ ಸಿಡುಕುತ್ತಾರಷ್ಟೇ ಎಂದು ಸರ್ಟಿಫಿಕೇಟ್ ನೀಡಿದ್ದಾರೆ.
ಕೊಲೆ ಮಾಡುವಂತಹ ಬುದ್ಧಿ ದರ್ಶನ್ ಗೆ ಇಲ್ಲ. ನಾನು ಹಲವು ವರ್ಷಗಳಿಂದ ದರ್ಶನ್ ಅವರನ್ನು ಬಲ್ಲೆ. ನಾನು ಮತ್ತು ದರ್ಶನ್ ಸ್ನೇಹಿತರಾಗಿದ್ದೇವೆ. ಈ ಪ್ರಕರಣ ಯಾಕಾಯ್ತು? ಹೇಗಾಯ್ತು ನನಗೆ ಮಾಹಿತಿ ಇಲ್ಲ. ತನಿಖೆಯಿಂದ ಸತ್ಯ ವಿಚರ ಹೊರಬರಬೇಕು. ಆದರೆ ಇಷ್ಟು ಹೇಳುತ್ತೇನೆ ದರ್ಶನ್ ಕೊಲೆಗೆಡುಕ ಅಲ್ಲ ಎಂದು ಹೇಳಿದ್ದಾರೆ.