
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ಅಪರಿಚಿತ ಗುಂಪೊಂದು ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ.
ಜೂನ್ 15ರಂದು ನಟ ದರ್ಶನ್ ಹಾಗೂ ಗ್ಯಾಂಗ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಇಂಗ್ಲೀಷ್ ಪತ್ರಿಕೆ ವರದಿಗಾರರೊಬ್ಬರು ಮೊಬೈಲ್ ಹಿಡಿದು ವರದಿ ಮಾಡುತ್ತಿದ್ದರು. ಅನಾಮಿಕ ಗುಂಪೊಂದು ವರದಿಗಾರರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ.
ಪತ್ರಕರ್ತ ರಕ್ಷಿತ್ ಗೌಡ ಹಲ್ಲೆಗೊಳಗಾದ ವರದಿಗಾರ. ಅಪರಿಚಿತರು ರಕ್ಷಿತ್ ಗೌಡ ಅವರನ್ನು ಸುಮಾರು 50 ಮೀಟರ್ ಎಳೆದೊಯ್ದು ಥಳಿಸಿದ್ದಾರೆ. ಹಲ್ಲೆಯಿಂದಾಗಿ ರಕ್ಷಿತ್ ಮೂಗು, ಬಾಯಿಯಿಂದ ರಕ್ತ ಬಂದಿದೆ. ಇನ್ನೊಮ್ಮೆ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ರಕ್ಷಿತ್ ಗೌಡ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.