ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಗೆ ಚಿಕಿತ್ಸೆ ಕಾರಣಕ್ಕೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಇಂದು ಸಂಜೆ ವೇಳೆಗೆ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ದರ್ಶನ್ ಜಾಮೀನಿಗಾಗಿ ಶ್ಯೂರಿಟಿ ಪ್ರಕ್ರಿಯೆ ಆರಂಭವಾಗಿದ್ದು, ನಟ ಧನ್ವೀರ್ ಹಾಗೂ ಸಹೋದರ ದಿನಕರ್ ಕೋರ್ಟ್ ಗೆ ಶ್ಯೂರಿಟಿ ಸಲ್ಲಿಸಿದ್ದಾರೆ. ಅಲ್ಲದೇ ದರ್ಶನ್ ಪಾಸ್ ಪೋರ್ಟ್ ನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.
ಇದೇ ವೇಳೆ ಕೋರ್ಟ್, ಜಾಮೀನು ಸಿಕ್ಕರೂ ದರ್ಶನ್ ಮೈಸೂರಿಗೆ ಹೋಗುವಂತಿಲ್ಲ. ಬೆಂಗಳೂರಿನಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕು. 6 ವಾರಗಳಿಗೆ ಮಾತ್ರ ಮಧ್ಯಂತರ ಜಾಮೀನು ಮಂಜೂರಾಗಿದ್ದು, 6 ವಾರಗಳ ಬಳಿಕ ದರ್ಶನ್ ಮತ್ತೆ ಕೋರ್ಟ್ ಮುಂದೆ ಶರಣಾಗಬೇಕು ಎಂದು ಸೂಚಿಸಿದೆ.
ಶ್ಯೂರಿಟಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಳ್ಳಾರಿ ಜೈಲಿಗೆ ಇ-ಮೇಲ್ ಮೂಲಕ ದರ್ಶನ್ ಬಿಡುಗಡೆ ಆದೇಶ ರವಾನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆಗೆ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.