ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಮತ್ತೆ ನಿರಾಸೆಯಾಗಿದೆ. ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆರೋಪಿಗಳಿಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿ ಹೈಕೋರ್ಟ್ ಆದೇಶ ನೀಡಿದೆ.
ದರ್ಶನ್ ಹಾಗೂ ಗ್ಯಾಂಗ್ ನ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಇಂದು ಹೈಕೋರ್ಟ್, ಸರ್ಕಾರದ ಪರ ವಕೀಲ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ನಾಗೇಶ್, ಅವರ ವಾದ ಹಾಗೂ ಪ್ರತಿವಾದವನ್ನು ಆಲಿಸಿತು.
ಈ ವೇಳೆ ನ್ಯಾ.ವಿಶ್ವಜಿತ್ ಶೆಟ್ಟಿ, ನಟ ದರ್ಶನ್ ಗೆ ಸರ್ಜರಿಗೆ ವಿಳಂಬ ಮಾಡುತ್ತಿರುವ ಕಾರ್ಣದ ಬಗ್ಗೆ ಪ್ರಶ್ನಿಸಿದರು. ಬಿಪಿಯಲ್ಲಿ ವ್ಯತ್ಯಾಸವಾಗುತ್ತಿರುವ ಕಾರಣ ಸರ್ಜರಿಗೆ ವೈದ್ಯರು ವಿಳಂಬ ಮಾಡುತ್ತಿರುವುದಾಗಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ದರ್ಶನ್ ಪರ ವಕೀಲರು ಕೋರ್ಟ್ ದಾರಿ ತಪ್ಪಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ತಲೆ ಬಾಚ್ಕೊಳಿ, ಪೌಡರ್ ಹಾಕ್ಕೊಳಿ ಎಂಬ ಹಾಡಿನ ರೀತಿಯಂತಿದೆ. ಎರಡು ವಾರದ ಹಿಂದೆಯೂ ಬಿಪಿ ವ್ಯತ್ಯಾಸ ಎಂಬ ಕಾರಣ ನೀಡಿದ್ದರು. ಔಷಧಿ ಮೂಲಕವೇ ಬಿಪಿ ನಿಯಂತ್ರಣದಲ್ಲಿಟ್ಟು ಸರ್ಜರಿ ಮಾಡಬಹುದಾಗಿದೆ ಎಂದು ವಾದ ಮಂಡಿಸಿದ್ದಾರೆ.
ಸುದೀರ್ಘ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ದರ್ಶನ್ ಹಾಗೂ ಗ್ಯಾಂಗ್ ನ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.