ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ.
ದರ್ಶನ್, ಪವಿತ್ರಾ ಗೌಡ ಸೇರಿ ಉಳಿದ ಆರೋಪಿಗಳು ಈಗಾಗಲೇ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಸೋಮವಾರ ಪ್ರಕರಣದಲ್ಲಿ ಇದುವರೆಗಿನ ವರದಿ ಕುರಿತಾಗಿ ವಿಚಾರಣಾ ನ್ಯಾಯಾಲಯದಿಂದ ಅಧಿಕೃತ ದಾಖಲೆ ಪಡೆದುಕೊಂಡು ನಂತರ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿಗಳು ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.
ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ನಟ ದರ್ಶನ್ ಅವರ ಭದ್ರತೆ ದೃಷ್ಟಿಯಿಂದ ವಿಶೇಷ ಸೆಲ್ ನಲ್ಲಿ ಇರಿಸಲಾಗಿದೆ. ಭಾನುವಾರ ರಜಾ ದಿನ ಕಾರಣಕ್ಕೆ ದರ್ಶನ್ ನೋಡಲು ಯಾರಿಗೂ ಅವಕಾಶ ನೀಡಿಲ್ಲ. ಸೋಮವಾರ ಸಂಬಂಧಿಕರು ಹಾಗೂ ವಕೀಲರು ದರ್ಶನ್ ಅವರನ್ನು ನೋಡಲು ಬರುವ ಸಾಧ್ಯತೆ ಇದೆ.
ದರ್ಶನ್ ಸಂದರ್ಶಿಸಲು ಬರುವವರಿಗೆ ಸಾಮಾನ್ಯ ಕೈದಿಗಳಿಗೆ ಅವಕಾಶ ಕಲ್ಪಿಸುವ ಸ್ಥಳದಲ್ಲಿ ಬಿಡಲು ಆಗುವುದಿಲ್ಲ. ಕೈದಿಗಳು ಕೂಡ ದರ್ಶನ್ ನೋಡಲು ಹೆಚ್ಚು ಸೇರುವ ಸಂಭವ ಇದೆ. ಗದ್ದಲಕ್ಕೂ ಕಾರಣವಾಗುತ್ತದೆ. ಹೀಗಾಗಿ ಸಂದರ್ಶಕರಿಗೆ ಸೂಚನೆ ನೀಡಿ ಅಧಿಕಾರಿಗಳ ಸಮ್ಮುಖದಲ್ಲಿ ದರ್ಶನ್ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಚಿಂತನೆ ಇದೆ.
ದರ್ಶನ್ ಜೈಲಿನಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ. ಜೈಲಿನ ಮೆನುವಿನಂತೆ ನೀಡಿದ ಉಪಹಾರ, ಊಟ ಸ್ವೀಕರಿಸಿದ್ದಾರೆ. ಕೊಠಡಿಯಲ್ಲಿಯೇ ಉಳಿದ ಸಮಯ ಕಳೆಯುತ್ತಿದ್ದು, ಕೊಠಡಿ ಬಳಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ ಎನ್ನಲಾಗಿದೆ.