ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಇನ್ನಷ್ಟು ಕರಾಳ ಮುಖಗಳು ಬಯಲಾಗುತ್ತಿವೆ. ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನಲ್ಲೇ ಮತ್ತಷ್ಟು ಹಳೆ ಪ್ರಕರಣಗಳು ಹೊರಬರುತ್ತಿವೆ.
ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಪರಿಹಾರ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟು ಹೆದರಿಸಿ ವಿಕೃತಿ ಮೆರೆದಿದ್ದರು. ಪರಿಣಾಮ ಬೇರೆ ಆಗುತ್ತದೇ ಎಂದು ಬೆದರಿಕೆ ಕೂಡ ಹಾಕಿದ್ದರು ಎಂದು ಸಂತ್ರಸ್ತ ಕುಟುಂಬ ಕಣ್ಣೀರಿಟ್ಟಿದೆ.
ಕೆಲ ವರ್ಷಗಳ ಹಿಂದೆ ಟಿ.ನರಸಿಪುರದ ತೂಗುದೀಪ್ ಫಾರ್ಮ್ ಹೌಸ್ ನಲ್ಲಿ ಚಾಮರಾಜನಗರದ ನಿಜಲಿಂಗಪುರದ ಮಹೇಶ್ ಎಂಬುವವರು ಕೆಲಸ ಮಾಡುತ್ತಿದ್ದರು. ಈ ವೇಳೆ ಎತ್ತು ಕೊಂಬಿನಿಂದ ತಿವಿದಿತ್ತು. ಮಹೇಶ್ ಅವರ ಕಣ್ಣಿನ ಭಾಗಕ್ಕೆ ಎತ್ತು ತಿವಿದು ತಲೆ ಬುರುಡೆಗೂ ಗಂಭೀರವಾದ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಲಾಗಿತ್ತು.
ಸಂತ್ರಸ್ತ ಕಾರ್ಮಿಕ ಪರಿಹಾರ ಕೇಳಲೆಂದು ಫಾರ್ಮ್ ಹೌಸ್ ಗೆ ಹೋದರೆ ಡಿ ಗ್ಯಾಂಗ್ ಸಾಕುನಾಯಿಯನ್ನು ಛೂ ಬಿಟ್ಟು ಹೆದರಿಸಿದ್ದಾರೆ. ಬಳಿಕ ಮೈಸೂರಿನ ಹೋಟೆಲ್ ಗೆ ಮಾತುಕತೆಗೆ ಎಂದು ಕರೆದು ರೌಡಿಗಳಿಂದ ಬೆದರಿಕೆ ಹಾಕಿಸಿದ್ದಾರೆ. ವಿಷಯ ಹೊರಗೆ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಹೆದರಿಸಿ ಕಳುಹಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕಾರ್ಮಿಕ ಮಹೇಶ್ ಹಾಸಿಗೆ ಹಿಡಿದಿದ್ದಾರೆ. ಊಟಕ್ಕೂ ಗತಿಯಿಲ್ಲದ ಸ್ಥಿತಿ ಇದೆ ಎಂದು ಕಣ್ಣೀರಿಟ್ಟಿದ್ದಾರೆ.