ಬೆಂಗಳೂರು: ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಸೇರಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಶೆಡ್ ನಲ್ಲಿ ಕೂಡಿ ಹಾಕಿ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದರ್ಶನ್ ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.
ರೇಣುಕಾಸ್ವಾಮಿ ಅಪೋಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆತ ಪವಿತ್ರಾಗೌಡ ಹಾಗೂ ದರ್ಶನ್ ಬಗ್ಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎನ್ನಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್, ಫೋಟೋಗಳನ್ನು ಕಳುಹಿಸಿದ್ದ. ದರ್ಶನ್ ಸೂಚನೆ ಮೇರೆಗೆ ಚಿತ್ರದುರ್ಗದಿಂದ ರೇಣಿಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಕಾಮಾಕ್ಷಿಪಾಳ್ಯದಲ್ಲಿ ವಿನಯ್ ಎಂಬುವವರಿಗೆ ಸೇರಿದ ಶೆಡ್ ನಲ್ಲಿ ಕೂಡಿ ಹಾಕಿ ಜೂನ್ 8ರಂದು ಮಾರಣಾಂತಿಕವಾಗಿ ಆಯುಧಗಳಿಂದ ಹಲ್ಲೆ ನಡೆಸಿದ್ದರು.
ಶೆಡ್ ನಲ್ಲಿಯೇ ರೇಣುಕಾಸ್ವಾಮಿಯನ್ನು ಹತ್ಯೆಗೈದು ಕಾಮಾಕ್ಷಿಪಾಳ್ಯ ಮೋರಿಗೆ ತಂದು ಶವ ಬಿಸಾಕಿದ್ದರು. ಜೂನ್ 9ರಂದು ಮೃತದೇಹವನ್ನು ನಾಯಿಗಳು ಎಳೆಯುತ್ತಿದ್ದಾಗ ಸಾರ್ವಜನಿಕರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ರೇಣುಕಾಸ್ವಾಮಿ ಎಂಬಾತನ ಮೃತದೇಹ ಎಂಬುದು ಗೊತ್ತಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ನಾಲ್ವರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿ ದರ್ಶನ್ ಸೂಚನೆ ಮೇರೆಗೆ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಇದೀಗ ದರ್ಶನ್ ಸೇರಿದಂತೆ 10 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.