ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಮತ್ತೆ ನಿರಾಸೆಯಾಗಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಕೊಲೆ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮನೆ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಮನವಿ ಮಾಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ, ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.
ನಟ ದರ್ಶನ್ ಗೆ ಜೈಲೂಟ ಒಗ್ಗೂಡದೇ ಪರದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮನೆ ಊಟ, ಹಾಸಿಗೆ, ಪುಸ್ತಕ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದ ಪರ ವಕೀಲರು ನಟ ದರ್ಶನ್ ಮನವಿಯನ್ನು ಪುರಸ್ಕರಿಸದಂತೆ ವಾದ ಮಂಡಿಸಿದ್ದಾರೆ. ದರ್ಶನ್ ಗೆ ಆರೋಗ್ಯ ಸಮಸ್ಯೆ ಎಂದು ಯಾವುದೇ ಮೆಡಿಕಲ್ ಟೆಸ್ಟ್ ವರದಿಯಲ್ಲಿಯೂ ಇಲ್ಲ. ಜೈಲೂಟದಿಂದ ಆರೋಗ್ಯ ಸಮಸ್ಯೆ ಎಂದು ಸುಮ್ಮನೇ ಕಥೆ ಹೇಳುತ್ತಿದ್ದಾರೆ. ಹಾಗಾಗಿ ಕೊಲೆ ಆರೋಪ ಹೊತ್ತಿರುವ ದರ್ಶನ್ ಗೆ ಜೈಲಿನಲ್ಲಿ ಮನೆ ಊಟ, ಹಾಸಿಗೆ ವ್ಯವಸ್ಥೆಗೆ ಅವಕಾಶ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.