ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಬಂಧನಕ್ಕೆ ಒಳಗಾಗಿ 100 ದಿನ ಪೂರೈಸಿದೆ.
ಜೂನ್ 11ರಂದು ಮೈಸೂರಿನಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಪ್ರಕರಣದ ವಿಚಾರಣೆಯ ನಂತರ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ವಿಚರಣಾಧೀನ ಕೈದಿಯಾಗಿದ್ದ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ವಿರುದ್ಧ ಈಗಾಗಲೇ ತನಿಖೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ.
ಇಂದಿಗೆ ದರ್ಶನ್ ಬಂಧನವಾಗಿ 100 ದಿನ ಪೂರೈಸಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಾಧಾರ, ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ಉಳಿದ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಗೆ ಕನಿಷ್ಠ ಸೌಲಭ್ಯವನ್ನು ಕೂಡ ಕಲ್ಪಿಸುತ್ತಿಲ್ಲ. ಅವರು ಇರುವ ಬ್ಯಾರಕ್ ನಲ್ಲಿ ಕುರ್ಚಿ ಕೂಡ ಇಲ್ಲ. ದರ್ಶನ್ ಭೇಟಿಗೆ ಅವರ ಪತ್ನಿ, ಸಹೋದರ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಜೈಲು ಅಧಿಕಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸೂಚನೆ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.
ಆರೋಪಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಕುಟುಂಬದ ಸ್ನೇಹಿತರಿಗೆ ಭೇಟಿಗೆ ಅವಕಾಶ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದೆ.