ಬೆಂಗಳೂರು: 48 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಮತ್ತು ಪಾನ್ ಮಸಾಲ ತುಂಬಿದ್ದ ಲಾರಿಯನ್ನು ಹೈಜಾಕ್ ಮಾಡಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಲಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಇದರ ನಡುವೆ ಗುಟ್ಕಾ, ಪಾನ್ ಮಸಾಲದಿಂದ ಲಾಭ ಗಳಿಸಬಹುದು ಎಂಬ ಉದ್ದೇಶದಿಂದ ಕೆಲವರು ಲಾರಿ ಅಪಹರಿಸಿದ್ದಾರೆ. ಚಂದ್ರ ಲೇಔಟ್ ಠಾಣೆ ಪೊಲೀಸರ ಸಕಾಲಿಕ ಪ್ರಯತ್ನದಿಂದಾಗಿ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ರಕ್ ವೊಂದರಲ್ಲಿ ಗೋದಾಮಿನಿಂದ 48 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ, ಪಾನ್ ಮಸಾಲ ತುಂಬಿಸಿಕೊಂಡು ವಿಜಯಪುರಕ್ಕೆ ತೆರಳಬೇಕಿತ್ತು. ಮೈಸೂರು ಸಮೀಪದಲ್ಲಿ ಟ್ರಕ್ ಚಾಲಕ ನೊಂದಿಗೆ ಜಗಳವಾಡಿದ ಕೆಲವರು ಆತನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಲಗ್ಗೆರೆ ಬಳಿ ಬಿಟ್ಟಿದ್ದಾರೆ. ಗ್ಯಾಂಗ್ ಸದಸ್ಯನೊಬ್ಬ ಸರಕು ತುಂಬಿದ ಟ್ರಕ್ ಅನ್ನು ಸಿಟಿ ಮಾರ್ಕೆಟ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಾನೆ.
ಚಾಲಕ ಟ್ರಕ್ ಮಾಲೀಕ ನಿರ್ಮಲ್ ಜೈನ್ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರ ಅಪಹರಣ ನಡೆದ ಸ್ಥಳಕ್ಕೆ ನಿರ್ಮಲ್ ಜೈನ್ ಮತ್ತು ಚಾಲಕ ಇಬ್ಬರು ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಪೋಲಿಸ್ ಇನ್ಸ್ ಪೆಕ್ಟರ್ ವಿಶೇಷ ತಂಡಗಳನ್ನು ರಚಿಸಿ ಲಾರಿಯನ್ನು ಪತ್ತೆ ಹಚ್ಚಿದ್ದಾರೆ. ಲಾರಿಯಲ್ಲಿ ಸಂಪೂರ್ಣವಾಗಿ ಗುಟ್ಕಾ ಮತ್ತು ಪಾನ್ ಮಸಾಲ ತುಂಬಿರುವುದು ಕಂಡುಬಂದಿದೆ.
ಲಾಕ್ ಡೌನ್ ನಿಂದ ಬಂದ್ ಜಾರಿಯಲ್ಲಿರುವ ಕಾರಣ ಆರೋಪಿಗಳು ಸರಕು ಇಳಿಸುವಲ್ಲಿ ವಿಫಲವಾಗಿದ್ದಾರೆ. ಅದನ್ನು ಹೊಲದಲ್ಲಿಯೇ ಬಿಟ್ಟಿದ್ದಾರೆ. ಚಾಲಕ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರಿಂದ ಸುಲಭವಾಗಿ ಪತ್ತೆ ಮಾಡಲಾಗಿದೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಲಾಗಿದೆ.