ಚೆನ್ನೈ: ತಮಿಳುನಾಡಿನ ತಿರುವಳ್ಳೂರಿನಲ್ಲಿ ಸರಕು ರೈಲಿಗೆ ರೈಲು ಡಿಕ್ಕಿ ಹೊಡೆದ ನಂತರ ದರ್ಭಾಂಗಾ ಎಕ್ಸ್ಪ್ರೆಸ್ನ ಎರಡು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
12578 ಮೈಸೂರು-ದರ್ಭಾಂಗ್ ಎಕ್ಸ್ ಪ್ರೆಸ್ ರಾತ್ರಿ 8:50 ಕ್ಕೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ರೈಲು ನಿಂತಿದ್ದ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಲಭ್ಯ ಮಾಹಿತಿ ಪ್ರಕಾರ ಅದೇ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ.
ಅಶ್ವಿನಿ ವೈಷ್ಣವ್ ಪರಿಸ್ಥಿತಿ ಪರಿಶೀಲನೆ
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮೈಸೂರು-ದರ್ಭಾಂಗ ಎಕ್ಸ್ಪ್ರೆಸ್ ಅಪಘಾತದ ಬಗ್ಗೆ ಮಾಹಿತಿ ಪಡೆದರು ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದರು. ಅವರು ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಗಾಯಗೊಂಡಿರುವ ಪ್ರಯಾಣಿಕರಿಗೆ ಆದಷ್ಟು ಬೇಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡುವಂತೆ ತಿಳಿಸಿದರು. ಆದಷ್ಟು ಬೇಗ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಳಿತಪ್ಪಿದ 13 ಬೋಗಿಗಳು
ಇತ್ತೀಚಿನ ವರದಿಗಳ ಪ್ರಕಾರ ಸುಮಾರು 13 ಬೋಗಿಗಳು ಹಳಿತಪ್ಪಿವೆ. ದರ್ಬಂಗಾ ಎಕ್ಸ್ಪ್ರೆಸ್ ಲೂಪ್ ಲೈನ್ಗೆ ಪ್ರವೇಶಿಸಿ ನಿಂತ ರೈಲಿಗೆ ಡಿಕ್ಕಿ ಹೊಡೆದಿದೆ. ಹಳಿಯಲ್ಲಿ ಸ್ವಲ್ಪ ಜರ್ಕ್ ಆಗಿದ್ದು, ರೈಲು ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚೆನ್ನೈ ಸೆಂಟ್ರಲ್ನಿಂದ ವೈದ್ಯಕೀಯ ಪರಿಹಾರ ವ್ಯಾನ್ ಮತ್ತು ರಕ್ಷಣಾ ತಂಡಗಳು ಮತ್ತು ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಸಿಬ್ಬಂದಿ ಮತ್ತು ಚಾಲಕ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಪಾರ್ಸೆಲ್ ವ್ಯಾನ್ನಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ ಮತ್ತು ಘಟನೆಯಿಂದಾಗಿ ಒಟ್ಟು 13ಬೋಗಿಗಳು ಹಳಿತಪ್ಪಿವೆ. ಅಪಘಾತದ ವರದಿಯಾದ ಕೂಡಲೇ ಸುಮಾರು 400 ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸುವಲ್ಲಿ ಸಹಾಯ ಮಾಡಿದರು.
ಮಾರ್ಗ ಬದಲಿಸಿದ ರೈಲುಗಳ ಪಟ್ಟಿ:
ಅಪಘಾತದ ಕಾರಣ, ಮೂರು ರೈಲುಗಳು ಚೆನ್ನೈ ಗುಡೂರ್ ಪ್ರದೇಶದಲ್ಲಿ ಸಿಲುಕಿಕೊಂಡಿವೆ, ಅವುಗಳನ್ನು ಬೇರೆ ಮಾರ್ಗಗಳಲ್ಲಿ ತಿರುಗಿಸಲು ಯೋಜಿಸಲಾಗಿದೆ:
ತಿರುಚಿರಾಪಳ್ಳಿ ಹೌರಾ ಎಕ್ಸ್ ಪ್ರೆಸ್
ಎರ್ನಾಕುಲಂ ಟಾಟಾನಗರ ಎಕ್ಸ್ ಪ್ರೆಸ್
ಕಾಕಿನಾಡ ಧನಬಾದ್ ವಿಶೇಷ ಎಕ್ಸ್ ಪ್ರೆಸ್