ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಅನ್ನದಾತ ರೈತರಿಗೆ ಬಂಪರ್ ಕೊಡುಗೆ ಘೋಷಿಸಿದೆ.
ಡಿಎಪಿ ಎನ್‌ಬಿಎಸ್ ಸಬ್ಸಿಡಿ ಆಚೆಗಿನ ಏಕ ಸಮಯದ ವಿಶೇಷ ಪ್ಯಾಕೇಜ್ ಅನ್ನು ಜನವರಿ 1ರಿಂದ ಮುಂದಿನ ಆದೇಶದವರೆಗೆ ವಿಸ್ತರಣೆ ಮಾಡಲು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರೈತರಿಗೆ ಕೈಗೆಟುಕುವ ದರದಲ್ಲಿ ಡಿಎಪಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿಮೆಟ್ರಿಕ್ ಟನ್ ಡಿಎಪಿಯ ವಿಶೇಷ ಪ್ಯಾಕೇಜ್ ಅನ್ನು ಎನ್‌ಬಿಎಸ್ ಸಬ್ಸಿಡಿ ಆದ 3500 ರೂ. ಆಚೆಗೆ ವಿಸ್ತರಿಸುವ ಬಗ್ಗೆ ರಸಗೊಬ್ಬರಗಳ ಸಚಿವಾಲಯ ಮಾಡಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಹೆಚ್ಚುವರಿ ಒಂದು ವರ್ಷ ನೈಸರ್ಗಿಕ ವಿಭಾಗ ವಿಕೋಪಗಳಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ಸಿಗಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಹಾಯ ಲಭಿಸಲಿದೆ. ಫಸಲ್ ಭೀಮಾ ಮತ್ತು ಪುನರ್ ರಚಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳ ಒಟ್ಟು ವೆಚ್ಚವನ್ನು ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇನ್ನು ಬ್ಲಾಕ್ ಮಟ್ಟದಲ್ಲಿ ಸ್ವಯಂ ಚಾಲಿತ ಹವಾಮಾನ ಕೇಂದ್ರಗಳು, ಪಂಚಾಯಿತಿ ಮಟ್ಟದಲ್ಲಿ ಸ್ವಯಂ ಚಾಲಿತ ಮಳೆ ಮಾಪಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಕುಗ್ರಾಮಗಳ ರೈತರು ಈ ಕೇಂದ್ರಗಳ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ.