
ಇಡೀ ಪ್ರಪಂಚದಲ್ಲಿ ಸದ್ಯ ಕೊರೋನಾ ಉಲ್ಭಣವಾಗಿದೆ. ಹಲವು ದೇಶಗಳು ಕೋವಿಡ್ ಹೆಚ್ಚಳದಿಂದ ತತ್ತರಿಸುತ್ತಿವೆ. ಹೀಗಿರುವಾಗ ಒಮಿಕ್ರಾನ್ ರೂಪಾಂತರಿಯನ್ನ “ಕೇವಲ ಸೌಮ್ಯ ಕಾಯಿಲೆ” (ಮೈಲ್ಡ್ ಡಿಸೀಸ್) ಎಂದು ಸೂಚಿಸುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ಹೊರ ಹಾಕಿದೆ.
ಸಾಂಕ್ರಾಮಿಕ ರೋಗಗಳ ತಜ್ಞೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ತಾಂತ್ರಿಕ ಸಮಿತಿಯ ಪ್ರಮುಖ ಸದಸ್ಯೆ, ಮಾರಿಯಾ ವ್ಯಾನ್ ಕೆರ್ಖೋವ್ ಒಮಿಕ್ರಾನ್ ಬಗ್ಗೆ ಆತಂಕ ಸೂಚಿಸಿದ್ದಾರೆ.
ಹೌದು, ಅತಿ ಸರಳೀಕೃತ ನಿರೂಪಣೆಗಳು ಅಪಾಯಕಾರಿಯಾಗಬಹುದು. ಡೆಲ್ಟಾಕ್ಕೆ ಹೋಲಿಸಿದರೆ, ಒಮಿಕ್ರಾನ್ ಪತ್ತೆಯಾದವರಲ್ಲಿ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಕಡಿಮೆ ಇರಬಹುದು. ಈ ಸೋಂಕು ತಗುಲಿದವರಿಗೆ ಅಪಾಯ ಕಡಿಮೆ. ಹಾಗಂತ ಒಮಿಕ್ರಾನ್ ಕೇವಲ ಸೌಮ್ಯ ಕಾಯಿಲೆ ಎಂದು ಸೂಚಿಸುವುದು ಅಪಾಯಕಾರಿ. ಕಡಿಮೆ ಅಪಾಯವಿದ್ದರೂ ಸಹ ನಮ್ಮ ಲೆಕ್ಕಾಚಾರಗಳೆಲ್ಲ ಉಲ್ಟಾ ಆಗಿರುವುದನ್ನ ನೋಡಿದ್ದೇವೆ. ಈ ಒಮಿಕ್ರಾನ್ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಜಾಗ ಇರದಂತ ಪರಿಸ್ಥಿತಿ ಸೃಷ್ಟಿಯಾಗಬಹುದು. ದಯವಿಟ್ಟು ಜಾಗರೂಕರಾಗಿರಿ ಎಂದು ಮಾರಿಯಾ ತಿಳಿಸಿದ್ದಾರೆ.
ಒಮಿಕ್ರಾನ್ ಪತ್ತೆಯಾದ ಮೊದಲ ದಿನದಿಂದಲೂ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚಕ್ಕೆ ಈ ಬಗ್ಗೆ ಎಚ್ಚರಿಸುತ್ತಲೆ ಇದೆ. ಒಮಿಕ್ರಾನನ್ನ ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮಗಳನ್ನ ಜರುಗಿಸಿ ಎಂದು ತಿಳಿಸಿದೆ. ಅದಲ್ಲದೆ, WHO ಹಲವಾರು ಸಂದರ್ಭಗಳಲ್ಲಿ ಈ ಬಗ್ಗೆ ಸರ್ಕಾರಗಳಿಗೆ ಎಚ್ಚರಿಕೆ ಸಹ ನೀಡಿದೆ. ಈ ಹಿಂದೆಯೂ ಕೋವಿಡ್ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡಿರೊ WHO, ಕಾರ್ಯಕ್ರಮಗಳು ಮತ್ತು ಕೂಟಗಳನ್ನು ರದ್ದುಗೊಳಿಸುವಂತೆ ಕೇಳಿಕೊಂಡಿತ್ತು.