ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕಿ ಅಮೃತಾ ಎಕ್ಕಾ ಅವರ ಪತಿಯ ಬಳಿ ಅಪರೂಪದ, ಅತ್ಯಂತ ದುಬಾರಿ ಮೌಲ್ಯದ ಮತ್ತು ಭಾರಿ ಅಪಾಯಕಾರಿಯದ ಕ್ಯಾಲಿಫೋರ್ನಿಯಂ ಎಂಬ ವಿಕಿರಣಶೀಲ ರಾಸಾಯನಿಕ ವಸ್ತು ಪತ್ತೆಯಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಡಾರ್ಜಿಲಿಂಗ್ ನಕ್ಸಲ್ ಬಾರಿಯಲ್ಲಿ ಅಮೃತಾ ಎಕ್ಕಾ ಪತಿ ಫ್ರಾನ್ಸಿಸ್ ಎಕ್ಕಾ ಮನೆಯಲ್ಲಿ ಕ್ಯಾಲಿಫೋರ್ನಿಯಂ ವಿಕಿರಣಶೀಲ ರಾಸಾಯನಿಕವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಅಪಾಯಕಾರಿ ರಾಸಾಯನಿಕವಾಗಿದ್ದು, ಅಣುಸ್ಥಾವರದಂತಹ ವಲಯದಲ್ಲಿ ಬಳಕೆ ಮಾಡಲಾಗುತ್ತದೆ. ಇದರ ಮೌಲ್ಯ ಒಂದು ಗ್ರಾಂಗೆ ಸುಮಾರು 17 ಕೋಟಿ ರೂಪಾಯಿ ಇದೆ.
ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ, ಪಶ್ಚಿಮ ಬಂಗಾಳ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಫ್ರಾನ್ಸಿಸ್ ಎಕ್ಕಾ ಅವರನ್ನು ಬಂಧಿಸಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO) ಕೆಲವು ಸೂಕ್ಷ್ಮ ದಾಖಲೆಗಳನ್ನು ಕೂಡ ಅವರ ಮನೆಯಿಂದ ವಶಕ್ಕೆ ಪಡೆಯಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.