ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ ‘ದಂಗಲ್’ ನಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಅಕಾಲಿಕ ಸಾವು ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಡರ್ಮಟೊಮಿಯೊಸಿಟಿಸ್ ಎಂಬ ಅಪರೂಪದ ಮತ್ತು ಅಪಾಯಕಾರಿ ಕಾಯಿಲೆ ಸುಹಾನಿಯನ್ನು ಬಲಿಪಡೆದಿದೆ. ಡರ್ಮಟೊಮಿಯೊಸಿಟಿಸ್ ಕಾಯಿಲೆ, ದೇಹದ ಸ್ನಾಯುಗಳಲ್ಲಿ ಊತ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ.
ಈ ರೋಗವು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಆದರೆ ಇದು ಸಾಮಾನ್ಯವಾಗಿ 40 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಮತ್ತು 5 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಈ ರೋಗವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಡರ್ಮಟೊಮಿಯೊಸಿಟಿಸ್‌ಗೆ ಸಂಪೂರ್ಣ ಪರಿಣಾಮಕಾರಿಯಾದ ಚಿಕಿತ್ಸೆಯಿಲ್ಲ. ಆದರೆ ಟ್ರೀಟ್ಮೆಂಟ್ ಮೂಲಕ ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು. ಚರ್ಮದ ಮೇಲೆ ಕಾಣಿಸಿಕೊಳ್ಳುವ ದದ್ದುಗಳನ್ನು ಗುಣಪಡಿಸುವುದು, ಸ್ನಾಯುಗಳನ್ನು ಮತ್ತೆ ಬಲಗೊಳಿಸುವುದು ಚಿಕಿತ್ಸೆಯ ಮುಖ್ಯ ಗುರಿ. ಇದಕ್ಕಾಗಿ ವೈದ್ಯರು ಔಷಧಿಗಳು, ಕೆಲವು ವಿಶೇಷ ಚಿಕಿತ್ಸೆ ಮತ್ತು ನಿರ್ದಿಷ್ಟ ಆಹಾರಗಳನ್ನು ಸೂಚಿಸುತ್ತಾರೆ.
ಡರ್ಮಟೊಮಿಯೊಸಿಟಿಸ್ ಕಾಯಿಲೆಯ ಪರಿಣಾಮಗಳು ಸಾಕಷ್ಟು ಗಂಭೀರವಾಗಿವೆ. ಇದರಿಂದ ಪ್ರತಿ ವರ್ಷ ಸಾವಿರಾರು ಜನರು ಸಾಯುತ್ತಾರೆ. ಆದರೆ ಸಾವು-ನೋವಿನ ಬಗ್ಗೆ ನಿಖರ ಅಂಕಿ-ಅಂಶಗಳಿಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಮಾರಣಾಂತಿಕವಾಗುತ್ತದೆ.
ಈ ಕಾಯಿಲೆಯ ತೀವ್ರತರವಾದ ಪ್ರಕರಣಗಳಲ್ಲಿ ಶ್ವಾಸಕೋಶ ಮತ್ತು ಹೃದಯದಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಜೀವಕ್ಕೆ ಅಪಾಯ ಎದುರಾಗುತ್ತದೆ. ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಕ್ಕಿದರೆ ರೋಗಿಯ ಪ್ರಾಣ ಉಳಿಸಬಹುದು.