
ಉತ್ತರ ಕನ್ನಡ ಜಿಲ್ಲೆ, ದಾಂಡೇಲಿ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 14 ಮಂದಿ ಪ್ರೌಢಶಾಲಾ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕೈ ಕೊಯ್ದುಕೊಂಡ ಪ್ರಕರಣ ನಡೆದಿದೆ.
ಜನತಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿಯರು ಹೀಗೆ ಸಾಮೂಹಿಕವಾಗಿ ಕೈ ಕೊಯ್ದುಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯಾವ ಕಾರಣಕ್ಕೆ ವಿದ್ಯಾರ್ಥಿನಿಯರು ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಸಂಗತಿ ಬಹಿರಂಗವಾಗಿಲ್ಲ.
ಶುಕ್ರವಾರ ಸಂಜೆ ಈ ಮಾಹಿತಿ ಬಹಿರಂಗವಾದ ಬಳಿಕ ಶನಿವಾರ ಪೊಲೀಸರು ಶಾಲೆಗೆ ಭೇಟಿ ನೀಡಿದ್ದು, ಇಂತಹ ಘಟನೆ ನಡೆದರೂ ಈವರೆಗೆ ಏಕೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯರ ಕುರಿತು ಗಮನ ನೀಡುವಂತೆ ಸೂಚಿಸಿದ್ದಾರೆ.
ಕೈ ಕೊಯ್ದುಕೊಂಡ ಕುರಿತು ವಿದ್ಯಾರ್ಥಿನಿಯರನ್ನು ಶಿಕ್ಷಕರು ಪ್ರಶ್ನಿಸಿದ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸಿದ್ದಾರೆ ಎನ್ನಲಾಗಿದ್ದು, ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಈ ಘಟನೆಯಿಂದ ಪೋಷಕರು ಸಹ ಆತಂಕಗೊಂಡಿದ್ದಾರೆ ಎನ್ನಲಾಗಿದೆ.